ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ನೇತ್ರತ್ವದಲ್ಲಿ ಸರ್ವರಂಗಳಲ್ಲೂ ಅಭಿವೃದ್ಧಿ; ಅಣ್ಣಾಸಾಹೇಬ ಜೊಲ್ಲೆ

Published 7 ಜೂನ್ 2023, 13:03 IST
Last Updated 7 ಜೂನ್ 2023, 13:03 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ
ಚಿಕ್ಕೋಡಿ: 'ಕಳೆದ 9 ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ಸರ್ವ ರಂಗಗಳಲ್ಲೂ ಸಶಕ್ತಗೊಳಿಸುವ ಮೂಲಕ ವಿಶ್ವದ ಬಲಾಢ್ಯ ರಾಷ್ಟವನ್ನಾಗಿ ರೂಪಿಸಿದ್ದು, ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು' ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಯಶಸ್ವಿ 9 ವರ್ಷ ಪೂರೈಸಿರುವ ಪ್ರಯುಕ್ತ ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಬುಧವಾರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಹಮ್ಮಿಕೊಂಡಿದ್ದ ಮಹಾ ಜನಸಂಪರ್ಕ ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ 9 ವರ್ಷಗಳಲ್ಲಿ ಉಜ್ವಲ ಯೋಜನೆಯಡಿ ದೇಶದ 9.60 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಎರಡು ವರ್ಷಗಳಿಂದ 80 ಕೋಟಿ ಕುಟುಂಬಗಳಿಗೆ ಉಚಿತ ಪಡಿತರ, ಪಿಎಂ ಆವಾಸ್ ಯೋಜನೆಯಡಿ 3 ಕೋಟಿಗೂ ಅಧಿಕ ಮನೆಗಳು, ಸ್ವಚ್ಛ ಭಾರತ ಯೋಜನೆಯಡಿ 11.72 ಕೋಟಿ ಶೌಚಾಲಯಗಳ ನಿರ್ಮಾಣ, ಜೆಜೆಎಂ ಯೋಜನೆಯಡಿ 12 ಕೋಟಿ ಅಧಿಕ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ, 27 ಕೋಟಿಗೂ ಹೆಚ್ಚು ಜನರಿಗೆ ಮುದ್ರಾ ಯೋಜನೆಯಡಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ದೇಶ ಸಾರಿಗೆ, ಸಂಪರ್ಕ ಕ್ಷೇತ್ರದಲ್ಲೂ ಅಮೂಲಾಗ್ರ ಬೆಳವಣಿಗೆ ಕಂಡಿದೆ. 24 ರಷ್ಟಿದ್ದ ವಿಮಾನ ನಿಲ್ದಾಣಗಳನ್ನು 144ಕ್ಕೆ ಹೆಚ್ಚಿಸಿದೆ. ಗ್ರಾಮೀಣ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸಿದೆ. ಮೆಟ್ರೊ ರೈಲು ಸೇವೆಯನ್ನು ಹಲವು ಮಹಾನಗರಗಳಿಗೆ ಪರಿಚಯಿಸಿದೆ. 58 ಕೋಟಿ ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಸೇವೆ ಒದಗಿಸಿದೆ. ವೈದ್ಯಕೀಯ ಕಾಲೇಜುಗಳನ್ನು 387 ರಿಂದ 697ಕ್ಕೆ ಹೆಚ್ಚಿದೆ ಇಂತಹ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ದೇಶ ವಿಶ್ವಗುರುವಾಗುವತ್ತ ದಾಪುಗಾಲು ಇಟ್ಟಿದೆ' ಎಂದು ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು,'ರಾಜ್ಯದಲ್ಲಿ ಸುಳ್ಳು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಜನರಿಗೆ ನೀಡಿರುವ ಭರವಸೆಗಳನ್ನು ಮರೆತು ಸುಳ್ಳು ಹೇಳಿದ ಸರ್ಕಾರವಾಗಿದೆ. ಜನ ಶೀಘ್ರದಲ್ಲೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಖಜಾನೆ ಖಾಲಿ ಮಾಡಿಯಾದರೂ ಗ್ಯಾರಂಟಿಗಳನ್ನು ನೀಡಲೇ ಬೇಕು. ಇದರಿಂದ ಪಾಕಿಸ್ತಾನಕ್ಕೆ ಬಂದಿರುವ ಆರ್ಥಿಕ ದುಸ್ಥಿತಿ ಕರ್ನಾಟಕಕ್ಕೂ ಬರಲಿದೆ. ಅಲ್ಲದೇ ರಾಜ್ಯದಲ್ಲಿ ಅರಾಜಕತೆ ಉಂಟಾಗಲಿದೆ' ಎಂದರು.
ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ ನೇರ್ಲೆ, ಮಂಡಳ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಮುಖಂಡರಾದ ಸುಭಾಷ ಚೌಗಲೆ, ಸುದರ್ಶನ ಚೌಗಲೆ, ಹುಮಾಯೂನ್ ಪಟೇಲ್, ಅನ್ನಪ್ಪ ಮೋಳಕೆ, ಮಲ್ಲಿಕಾರ್ಜುನ ಚೌಗಲೆ, ರೇವಯ್ಯ ಹಿರೇಮಠ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ತಾಲ್ಲೂಕಿನ ಸುಕ್ಷೇತ್ರ ಯಡೂರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ, ಕೇರೂರ ಮತ್ತು ನೇಜ್ ಗ್ರಾಮಗಳಲ್ಲೂ ಅಭಿಯಾನ ನಡೆಸಲಾಯಿತು. ಪಿಪಿಟಿ ಮೂಲಕ ಸಕರ್ಾರದ ಸಾಧನೆಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT