ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ: ನೆಚ್ಚಿನ ನಾಯಕ ಆನಂದ ಮಾಮನಿ ಅವರ ಅಂತಿಮ ದರ್ಶನ ಪಡೆದ ಜನ

Last Updated 23 ಅಕ್ಟೋಬರ್ 2022, 10:50 IST
ಅಕ್ಷರ ಗಾತ್ರ

ಸವದತ್ತಿ (ಬೆಳಗಾವಿ ಜಿಲ್ಲೆ): ಶನಿವಾರ ರಾತ್ರಿ ನಿಧನರಾದ ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ ಅವರ ಪಾರ್ಥಿವ ಶರೀರವನ್ನು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಅವರ ಅಭಿಮಾನಿಗಳು, ಕ್ಷೇತ್ರದ ಜನರು ಸಾಲಾಗಿ ಬಂದು ಅಂತಿಮ ದರ್ಶನ ಪಡೆದರು.

ಲಿವರ್‌ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ವಿಷಯ ತಿಳಿದ ತಕ್ಷಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ರಾತ್ರಿಯೇ ಆಸ್ಪತ್ರೆಗೆ ತೆರಳಿ ಕುಟುಂಬದವರಿಂದ ಮಾಹಿತಿ ಪಡೆದರು.

ಶಾಸಕರ ಕಳೆಬರ ಹೊತ್ತ ಆಂಬುಲೆನ್ಸ್‌ ಭಾನುವಾರ ಬೆಳಿಗ್ಗೆ ಸವದತ್ತಿ ತಲುಪಿತು. ರಾಷ್ಟ್ರಧ್ವಜ ಹೊದಿಸಿದ್ದ ಆನಂದ ಅವರ ಶವವನ್ನು ಆಂಬುಲೆನ್ಸ್‌ನಿಂದ ಹೊರ ತೆಗೆಯುತ್ತಿದ್ದಂತೆಯೇ ಕುಟುಂಬದವರು, ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿತು. ಗುಂಪಾಗಿ ಸೇರಿದ್ದ ಕ್ಷೇತ್ರದ ಜನ ಗೋಳಾಡಿ ಅತ್ತರು. ‘ಸಾಹುಕಾರ್‍ರೇ... ಮಾತಾಡ್ರಿ...’ ಎಂದು ಕೆಲವರು ದುಃಖಿಸಿದರು.

ನಂತರ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಬಂದೊಬಸ್ತ್‌ ಮಾಡಿದರು. ಪುರುಷರು, ಮಹಿಳೆಯರು ಸಾಲಾಗಿ ಬಂದು ಅಂತಿಮ ನಮನ ಸಲ್ಲಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಆನಂದ ಮಾಮನಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಬಸವರಾಜ ಹೊರಟ್ಟಿ, ಮಹೇಶ್ ಕುಮಠಳ್ಳಿ, ಜಗದೀಶ ಶೆಟ್ಟರ, ಮುರುಗೇಶ ನಿರಾಣಿ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಬೆಲ್ಲದ ಅವರಿದ್ದರು.

ಭಾನುವಾರ ದೀಪಾವಳಿ ಹಬ್ಬಕ್ಕೆ ಸಿದ್ಧತೆ ನಡೆದಿದ್ದರಿಂದ ಸಾಧ್ಯವಾದಷ್ಟು ಬೇಗ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT