ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು– ತುಮಕೂರು ರಾಷ್ಟ್ರೀಯ ಹೆದ್ದಾರಿ: ಟೋಲ್‌ ಪ್ಲಾಜಾ ಬಳಿ ನಿತ್ಯ 15 ನಿಮಿಷ ವ್ಯರ್ಥ

ವಾರಾಂತ್ಯ, ಹಬ್ಬಹರಿದಿನಗಳಲ್ಲಿ ಅರ್ಧ ಗಂಟೆ ಕಾಯಬೇಕು
Last Updated 28 ಜನವರಿ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು– ತುಮಕೂರು ನಡುವೆ ಪ್ರಯಾಣಿಸುವವರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರತಿ ಸುಂಕ ವಸೂಲಿ ಕೇಂದ್ರಗಳ (ಟೋಲ್‌ ಪ್ಲಾಜಾ) ಬಳಿ 15 ನಿಮಿಷಗಳಿಗೂ ಹೆಚ್ಚು ಹೊತ್ತು ಕಾಯಬೇಕಾದ ಪರಿಸ್ಥಿತಿ ನಿತ್ಯವೂ ನಿರ್ಮಾಣವಾಗುತ್ತಿದೆ.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹಾಗೂ ವಾರಾಂತ್ಯದಲ್ಲಿ ಇಲ್ಲಿ ವಾಹನಗಳ ದಟ್ಟಣೆ ಇನ್ನೂ ಹೆಚ್ಚು ಇರುತ್ತದೆ. ಆಗ ವಾಹನಗಳು 30 ನಿಮಿಷಗಳವರೆಗೂ ಸರದಿಯಲ್ಲಿ ನಿಲ್ಲಬೇಕು.

ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಬೆಂಗಳೂರು–ನೆಲಮಂಗಲದ ನಡುವೆ ಹಾಗೂ ನೆಲಮಂಗಲ– ಕ್ಯಾತಸಂದ್ರದ ಟೋಲ್‌ ಪ್ಲಾಜಾಗಳಿವೆ. ಮುಂಬೈ–ಬೆಳಗಾವಿ–ಬೆಂಗಳೂರು–ಚೆನ್ನೈ ನಗರಗಳನ್ನು ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಇಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಈ ಎರಡೂ ನಗರಗಳ ನಡುವೆ ನಿತ್ಯ ಪ್ರಯಾಣಿಸುವವರಂತೂ ಈ ಸಮಸ್ಯೆಯಿಂದ ಹೈರಾಣಾಗಿದ್ದಾರೆ.

ಫಾಸ್ಟ್ಯಾಗ್‌ ಅಳವಡಿಸಿರುವ ವಾಹನಗಳಿಗೆ ನಿಯಮ ಪ್ರಕಾರ, ಟೋಲ್‌ ಪ್ಲಾಜಾಗಳ ಬಳಿ ನೇರವಾಗಿ ಸಾಗಲು ಅವಕಾಶ ಕಲ್ಪಿಸಬೇಕು. ಈ ವಾಹನಗಳ ಮಾಲೀಕರು ಸುಂಕದ ಮೊತ್ತವನ್ನು ಮುಂಚಿತವಾಗಿ ಪಾವತಿಸಿರುತ್ತಾರೆ. ಟೋಲ್‌ ಪ್ಲಾಜಾದ ಮೂಲಕ ವಾಹನ ಸಾಗಿದಾಗ ಅಲ್ಲಿ ಪಾವತಿಸಬೇಕಾದಷ್ಟು ಮೊತ್ತವು ಅವರ ಫಾಸ್ಟ್ಯಾಗ್‌ ಖಾತೆಯಿಂದ ಕಡಿತವಾಗುತ್ತದೆ. ಆದರೆ, ಈ ವಾಹನಗಳೂ ಸರದಿಯಲ್ಲಿ ನಿಲ್ಲುವುದು ತಪ್ಪುತ್ತಿಲ್ಲ.

’ನನ್ನ ವಾಹನದಲ್ಲಿ ಫಾಸ್ಟ್ಯಾಗ್‌ ಅಳವಡಿಸಿದ್ದರೂ ಈ ಟೋಲ್‌ಗೇಟ್‌ಗಳ ಬಳಿ ಕಾಯುವುದು ತಪ್ಪದು. ವಾರಾಂತ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಯುವ ಪರಿಸ್ಥಿತಿ ಇದೆ. ತುಮಕೂರು ದಾಟಿದ ಬಳಿಕವಷ್ಟೇ ನಿರಾಳವಾಗಿ ವಾಹನ ಚಲಾಯಿಸಬಹುದು’ ಎಂದು ಬಹೂಪಯೋಗಿ ಸರಕು ಸಾಗಣೆ ವಾಹನದ ಚಾಲಕ ಶಿವಪ್ಪ ನಾಯಕ್‌ ಬೇಸರ ವ್ಯಕ್ತಪಡಿಸುತ್ತಾರೆ.

ಈ ಟೋಲ್‌ ಪ್ಲಾಜಾಗಳ ಬಳಿ ಹೆಚ್ಚುವರಿ ಲೇನ್‌ಗಳನ್ನು ನಿರ್ಮಿಸುವ ಮೂಲಕ ಕಾಯುವಿಕೆಯ ಸಮಸ್ಯೆ ನಿವಾರಿಸಬೇಕು ಎಂದು ಎಸ್‌.ಪಿ.ನಟರಾಜ್‌ ಒತ್ತಾಯಿಸುತ್ತಾರೆ. ಅವರು ತುಮಕೂರು–ಬೆಂಗಳೂರು ನಡುವೆ ವಾರವಿಡೀ (ರಜಾ ದಿನ ಹೊರತಾಗಿ) ಓಡಾಟ ನಡೆಸುತ್ತಾರೆ.

‘ದ್ವಿಚಕ್ರ ವಾಹನ ಸವಾರರು ಯಾವುದೇ ಸುಂಕ ಪಾವತಿಸುವುದಿಲ್ಲ. ಅವರು ಸರ್ವಿಸ್‌ ರಸ್ತೆ ಮೂಲಕವೇ ಸಾಗಬೇಕು. ಆದರೂ, ದ್ವಿಚಕ್ರ ವಾಹನಗಳು ಸುಂಕ ಪಾವತಿಸುವ ಲೇನ್‌ಗಳಲ್ಲೇ ಸಾಗುವುದನ್ನು ನೋಡಿದ್ದೇನೆ. ಇದಕ್ಕೆ ಕಡಿವಾಣ ಹಾಕಲು ಯಾವುದೇ ವ್ಯವಸ್ಥೆ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರವೇಶ ಮತ್ತು ನಿರ್ಗಮನ ಮಾರ್ಗಗಳೆರಡರಲ್ಲೂ ತಲಾ 10 ಲೇನ್‌ಗಳನ್ನು ಸುಂಕ ಪಾವತಿಗಾಗಿ ನಿರ್ಮಿಸಬೇಕು ಎಂದು ಸಮೀರ್‌ ಒತ್ತಾಯಿಸಿದರು.

‘ನಾನು ಉತ್ತರ ಭಾರತದಲ್ಲೂ ಪ್ರಯಾಣಿಸಿದ್ದೇನೆ. ಅಲ್ಲೆಲ್ಲ ಲೇನ್‌ಗಳ ಸಂಖ್ಯೆ ಹೆಚ್ಚು ಇರುತ್ತದೆ. ಹಾಗಾಗಿ ಎಲ್ಲೂ ಟೋಲ್‌ ಪ್ಲಾಜಾಗಳ ಬಳಿ ಕಾಯುವ ಸಂದರ್ಭ ಎದುರಾಗಿಲ್ಲ’ ಎಂದು ಅವರು ತಿಳಿಸಿದರು.

ನೆಲಮಂಗಲ–ತುಮಕೂರು ಹೆದ್ದಾರಿಯನ್ನು ಆರು ಪಥಗಳನ್ನಾಗಿ ಪರಿವರ್ತಿಸಿದರೆ ಈ ಟೋಲ್‌ ಪ್ಲಾಜಾಗಳ ಬಳಿಯೂ ಹೆಚ್ಚುವರಿ ಲೇನ್‌ಗಳನ್ನು ನಿರ್ಮಿಸಬಹುದು. ಟೋಲ್‌ ಪ್ಲಾಜಾಗಳ ಗುತ್ತಿಗೆ ಅವಧಿ 2021ರವರೆಗೆ ಇದೆ. ಹೆಚ್ಚುವರಿ ಲೇನ್‌ ನಿರ್ಮಿಸಲು ಈ ಗುತ್ತಿಗೆ ಅವಧಿ ಮುಗಿಯುವವರೆಗೆ ಕಾಯಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಯೊಬ್ಬರು ತಿಳಿಸಿದರು.

‘ಶೇ 18ರಷ್ಟು ವಾಹನಗಳಲ್ಲಿ ಫಾಸ್ಟ್ಯಾಗ್‌’

ನೆಲಮಂಗಲದ ಸುಂಕ ವಸೂಲಿ ಕೇಂದ್ರದ ಮೂಲಕ ಸಾಗುವ ವಾಹನಗಳಲ್ಲಿ ಶೇ 18ರಷ್ಟು ಮಾತ್ರ ಫಾಸ್ಟ್ಯಾಗ್‌ ಅಳವಡಿಸಿಕೊಂಡಿವೆ ಎನ್ನುತ್ತಾರೆ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಎಸ್‌.ಪಿ.ಸೋಮಶೇಖರ್‌. ‘ಫಾಸ್ಟ್ಯಾಗ್‌ ರೀಡ್‌ ಮಾಡಲು ಬೇಕಾದ ಉಪಕರಣವನ್ನು ಟೋಲ್‌ಗೇಟ್‌ಗಳ ಎಲ್ಲ ಲೇನ್‌ಗಳ ಬಳಿ ಅಳವಡಿಸಿದ್ದೇವೆ. ಟೋಲ್‌ಗಳ ಬಳಿ ಕಾಯುವುದನ್ನು ತಪ್ಪಿಸಲು ಹೆಚ್ಚು ವಾಹನಗಳಲ್ಲಿ ಈ ಸಾಧನ ಅಳವಡಿಸಬೇಕು ಎಂದು ನಮ್ಮ ಆಶಯ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT