ಸೋಮವಾರ, ಮೇ 23, 2022
24 °C
ಕೋವಿಡ್ ಪರೀಕ್ಷೆ ಮಾಡಿಸಲು ಅಭ್ಯರ್ಥಿಗಳ ನೂಕುನುಗ್ಗಲು

ಸೇನಾ ನೇಮಕಾತಿ ರ‍್ಯಾಲಿ ಫೆ.4ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮೈದಾನದಲ್ಲಿ ಫೆ.4ರಿಂದ 15ರವರೆಗೆ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದೆ.

ಸೇನಾ ನೇಮಕಾತಿ ಪ್ರಧಾನ ಕಚೇರಿ ಆಶ್ರಯದಲ್ಲಿ ಬೆಳಗಾವಿ, ರಾಯಚೂರು, ಯಾದಗಿರಿ, ಬೀದರ್, ಕೊಪ್ಪಳ ಮತ್ತು ಕಲಬುರ್ಗಿ ಜಿಲ್ಲೆಗಳಿಂದ ಪ್ರವೇಶಪತ್ರ ಪಡೆದ ಅಭ್ಯರ್ಥಿಗಳು ಬರಲಿದ್ದಾರೆ. ಸೈನ್ಯದ ನೇಮಕಾತಿ ಕಚೇರಿಯಿಂದ ಜಾಲತಾಣದ ಮೂಲಕ ಅಭ್ಯರ್ಥಿಗಳು ಆನ್‌ಲೈನ್ ನೋಂದಣಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. ಒಟ್ಟು 40ಸಾವಿರ ಅಭ್ಯರ್ಥಿಗಳು www.joinindianarmy.gov.in ಜಾಲತಾಣದಲ್ಲಿ ನೋಂದಾಯಿಸಿದ್ದರು. ಈ ಪೈಕಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅರ್ಹರಾದವರಿಗೆ ಪ್ರವೇಶಪತ್ರಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ವಿಟಿಯು ಮೈದಾನದ ಒಳಗೆ ಹಾಗೂ ಗೇಟ್ ಬಳಿಯಲ್ಲಿ ಪೊಲೀಸ್ ಇಲಾಖೆ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯಿಂದ ಭದ್ರತೆ ಒದಗಿಸಬೇಕು. ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಅಂಬುಲೆನ್ಸ್ ಸೌಲಭ್ಯ ನೀಡಬೇಕು ಮತ್ತು ರ‍್ಯಾಲಿ ನಡೆಯುವ ದಿನಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಿರಬೇಕು ಎಂದು ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ಬಸ್ ಸೌಲಭ್ಯ ಕಲ್ಪಿಸಬೇಕು. ಅಭ್ಯರ್ಥಿಗಳು ಉಳಿದುಕೊಳ್ಳಲು ಪೀರನವಾಡಿಯ ಕಲ್ಯಾಣಮಂಟಪದಲ್ಲಿ ವ್ಯವಸ್ಥೆ ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಮಹಾನಗರ ಪಾಲಿಕೆಯಿಂದ ಮೊಬೈಲ್ ಶೌಚಾಲಯ ವ್ಯವಸ್ಥೆ ಒದಗಿಸಬೇಕು. ಪ್ರತಿ ದಿನ ಸರಾಸರಿ 5ಸಾವಿರ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಕುಡಿಯುವ ನೀರು ಕಲ್ಪಿಸಲಾಗುವುದು. ಒಂದು ಸುತ್ತಿನಲ್ಲಿ 250 ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭ್ಯರ್ಥಿಗಳ ಪ್ರವೇಶಪತ್ರ ಹಾಗೂ ದಾಖಲಾತಿಗಳ ಪರಿಶೀಲನೆ ನಡೆಸಬೇಕು. ದಿನದ 24 ಗಂಟೆಯೂ ಅಗ್ನಿಶಾಮಕ ದಳವನ್ನು ನಿಯೋಜಿಸಬೇಕು ಎಂದು ತಿಳಿಸಲಾಗಿದೆ’ ಎಂದರು.

ರ‍್ಯಾಲಿ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ, ಮಂಗಳವಾರ ಇಲ್ಲಿನ ಬಿಮ್ಸ್‌ ಆಸ್ಪತ್ರೆಯಲ್ಲಿ ಪರೀಕ್ಷೆಗಾಗಿ ನೂರಾರು ಬಂದಿದ್ದರು. ಸರದಿಯಲ್ಲಿ ನಿಂತಿದ್ದ ಅವರು, ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳದಿರುವುದು ಕಂಡುಬಂತು.

ಒಮ್ಮೆಲೆ ನೂರಾರು ಮಂದಿ ಬಂದಿದ್ದರಿಂದ ಆಸ್ಪತ್ರೆ ಎದುರು ನೂಕು ನುಗ್ಗಲು ಉಂಟಾಯಿತು. ‘ನಸುಕಿನಲ್ಲೇ ಬೆಳಗಾವಿಗೆ ಬಂದಿದ್ದೇವೆ. ಸರದಿ ಸಾಲಿನಲ್ಲಿ ನಿಂತು ಎರಡೂವರೆ ಗಂಟೆಯಾಯಿತು. ಇನ್ನೂ ನನ್ನ ಸರದಿ ಬಂದಿಲ್ಲ. ನಮಗೆಂದೇ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ, ವರದಿ ಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಅಭ್ಯರ್ಥಿಗಳು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು