ಭಾನುವಾರ, ಜನವರಿ 17, 2021
22 °C

‘ಆರೋಗ್ಯಂ ಹೃದಯ ಸಂಪದ’ ಕಾರ್ಯಕ್ರಮ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಮಾಧವಬಾಗ್ ಆಸ್ಪತ್ರೆ, ವೈದ್ಯ ಸಾನೆ ಟ್ರಸ್ಟ್ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಜ. 12ರಿಂದ ‘ಆರೋಗ್ಯಂ ಹೃದಯ ಸಂಪದ’ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಮಾಧವಬಾಗ್ ಆಸ್ಪತ್ರೆ ಕರ್ನಾಟಕದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಡಾ.ಪ್ರಸಾದ್ ದೇಶಪಾಂಡೆ ತಿಳಿಸಿದರು.

‘ಅಂದು ಸಂಜೆ 4ಕ್ಕೆ ನಗರದ ಪೈ ರೆಸಾರ್ಟ್‌ ಹೋಟೆಲ್‌ನಲ್ಲಿ ಕಾರ್ಯಕ್ರಮ ಘೋಷಿಸಿ, ಚಾಲನೆ ನೀಡಲಾಗುವುದು. ಈ ವರ್ಷದಲ್ಲಿ ಒಂದು ಸಾವಿರ ರೋಗಿಗಳನ್ನು ಗುಣಪಡಿಸುವ ಪ್ರತಿಜ್ಞೆಯನ್ನು ಸ್ವೀಕರಿಸಲಾಗುವುದು. 500ಕ್ಕೂ ಹೆಚ್ಚು ಉಚಿತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ 25ಸಾವಿರ ಮಂದಿಯನ್ನು ತಲುಪುವ ಉದ್ದೇಶ ಹೊಂದಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಅವರು ತಿಳಿಸಿದರು.

‘ಆಸ್ಪತ್ರೆಯ ವೈದ್ಯರ ಸಲಹೆ ಹಾಗೂ ಸಂಪೂರ್ಣ ಆಯುರ್ವೇದ ಚಿಕಿತ್ಸೆ ಮೂಲಕ ಗುಣಮುಖರಾದವರನ್ನು ಕೂಡ ಪರಿಚಯಿಸಲಾಗುವುದು. ಅವರು ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಹೃದ್ರೋಗ, ಮಧುಮೇಹ ನ್ಯೂನತೆ ಹಾಗೂ ಅಧಿಕ ರಕ್ತದೊತ್ತಡವನ್ನು ಜೀವನಶೈಲಿ ಮೂಲಕವೇ ಗುಣಪಡಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ನಾವು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ. ಗುಣಮುಖರಾದವರು ಮತ್ತಷ್ಟು ಮಂದಿಗೆ ನೆರವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದರು.

‘ಅರಿವು ಕಾರ್ಯಕ್ರಮ, ಸಮಾಲೋಚನೆ ಹಾಗೂ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು. ರೋಗವು ಯಾವ ಹಂತದಲ್ಲಿದೆ ಎನ್ನುವುದನ್ನು  ಆಧರಿಸಿ ಚಿಕಿತ್ಸೆ ನೀಡಲಾಗುವುದು. ಅದಕ್ಕೆ ಹಣ ಪಾವತಿಸಬೇಕಾಗುತ್ತದೆ. ಆರ್ಥಿಕವಾಗಿ ಅಶಕ್ತರಾದವರಿಗೆ ವೈದ್ಯ ಸಾನೆ ಟ್ರಸ್ಟ್‌ ನೆರವಾಗಲಿದೆ. ಶಹಾಪುರದ ಶಿವಾಜಿ ಉದ್ಯಾನದ ಬಳಿ, ಹರಿಮಂದಿರ ಸಮೀಪ, ರಾಮದೇವ ವೃತ್ತ ಮತ್ತು ಕಾಲೇಜು ರಸ್ತೆಯಲ್ಲಿ ಮಾಧವಬಾಗ್ ಕ್ಲಿನಿಕ್ ಇವೆ. ಆಸಕ್ತರು ಭೇಟಿ ನೀಡಿ ಸಲಹೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮೊ: 9766875555 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ವೈದ್ಯ ಸಾನೆ ಟ್ರಸ್ಟ್‌ನ ಸಿಎಸ್‌ಆರ್ ಮುಖ್ಯಸ್ಥ ಡಾ.ಮಿಲಿಂದ ಸರ್ದಾರ, ರೋಟರಿ ಕ್ಲಬ್ ಅಸಿಸೆಂಟ್ ಗವರ್ನರ್ ಡಾ.ಮನೋಜ ಸುತಾರ, ರೋಟರಿ ಕ್ಲಬ್ ದರ್ಪಣ್ ಅಧ್ಯಕ್ಷೆ ಶೀತಲ್ ಪ್ರಕಾಶ್, ವೈದ್ಯರಾದ ವಿದ್ಯಾ, ಸುಮಲತಾ, ಸಾಗರ್ ಮತ್ತು ಸಂಗೀತಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು