ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಗೆಲ್ಲಲು ಇವೆ ಗಟ್ಟಿ ಕಾರಣಗಳು: ಅರುಣ್‌ ಸಿಂಗ್‌

Last Updated 16 ಅಕ್ಟೋಬರ್ 2022, 16:11 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿಯು ರಾಜ್ಯದಲ್ಲಿ ಗೆಲುವಿನ ಹಳಿಗಳ ಮೇಲೆ ಹೊರಟಿದೆ. ನಾವು ಈಗಾಗಲೇ ಗೆಲುವಿನ ಹಾದಿಯಲ್ಲಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆ ಮುಗಿದ ಬಳಿಕ ನಮ್ಮ ಗುರಿ ಮುಟ್ಟುತ್ತೇವೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

‘ನಾವು ಏಕೆ ಗೆಲ್ಲುತ್ತೇವೆ ಮತ್ತು ಏಕೆ ಗೆಲ್ಲಬೇಕು ಎಂಬ ಬಗ್ಗೆ ನಮಗೆ ಗಟ್ಟಿಯಾದ ಕಾರಣಗಳಿವೆ. ಸುಮ್ಮನೇ ಗಾಳಿಯಲ್ಲಿ ಮಾತು ತೇಲಿಸುವುದಿಲ್ಲ’ ಎಂದು ಅವರು ನಗರದಲ್ಲಿ ಭಾನುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

‘ಬಡವರು, ರೈತರು ಹಾಗೂ ಮಹಿಳೆಯರಿಗೆ ನಮ್ಮ ಸರ್ಕಾರಗಳು ಮಾಡಿದ ಅನುಕೂಲಗಳೇ ಗೆಲುವಿಗೆ ಮೆಟ್ಟಿಲು. ಈಗಾಗಲೇ ವಿಧಾನಸಭೆ ಕ್ಷೇತ್ರವಾರು ಸಂಕಲ್ಪ ಯಾತ್ರೆ ಶುರು ಮಾಡಿದ್ದೇವೆ. ಎಲ್ಲ ಕಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲುವುದು ನಮ್ಮ ದೃಢಸಂಕಲ್ಪ’ ಎಂದರು.

‘ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿದೆ. ಪಂಚಮಸಾಲಿ ಸಮುದಾಯದಿಂದಲೂ ಮೀಸಲಾತಿಗೆ ಹೋರಾಟ ನಡೆದಿದ್ದು ನಮಗೆ ಗೊತ್ತಿದೆ. ರಾಜ್ಯದಲ್ಲಿ ಆ ಸಮಾಜದ ಮೂವರು ಸಚಿವರು ಇದ್ದಾರೆ. ಮುಖ್ಯಮಂತ್ರಿ ಅವರೊಂದಿಗೆ ಕುಳಿತು ಮಾತನಾಡಿ, ಒಳ್ಳೆಯ ನಿರ್ಧಾರಕ್ಕೆ ಬರಲಿದ್ದಾರೆ’ ಎಂದರು.

‘ಹಿರಿಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡದಂತೆ ಶಾಸಕ ಬಸನಗೌಡ ‍ಪಾಟೀಲ ಯತ್ನಾಳ್‌ ಅವರಿಗೆ ತಾಕೀತು ಮಾಡಿದ್ದೇವೆ. ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕೊರಗು ಇರಬಹುದು. ಆ ಕಾರಣಕ್ಕಾಗಿ ಪಕ್ಷಕ್ಕೆ ಮುಜುಗರ ತರದಿರಲು ತಿಳಿಸಿದ್ದೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿ.ಎಸ್.ಯಡಿಯೂರಪ್ಪ ನಮ್ಮ ದೊಡ್ಡ ನಾಯಕರು. ಬಿಜೆಪಿ ಮಾತ್ರವಲ್ಲ; ಎಲ್ಲ ಪಕ್ಷಗಳ ಎಲ್ಲ ಮುಖಂಡರಿಗಿಂತಲೂ ದೊಡ್ಡ ನಾಯಕರು. ಪ್ರಭಾವಿ, ಅನುಭವಿ ಕೂಡ ಆಗಿದ್ದಾರೆ. ಬಿಜೆಪಿ ಗೆಲ್ಲಿಸಲು ಅವರೇ ಮುಂಚೂಣಿಯಲ್ಲಿ ನಿಲ್ಲುತ್ತಾರೆ’ ಎಂದು ಹೇಳಿದರು.

ಮನ ಭೇದವಿಲ್ಲ:‘ಬಿಜೆಪಿಯಲ್ಲಿ ಹಲವರ ಮಧ್ಯೆ ಮತಭೇದವಿದೆ. ಪಕ್ಷದ ಗಟ್ಟಿತನಕ್ಕೆ ಅದು ಇರಲೂಬೇಕು. ಆದರೆ, ಯಾರಲ್ಲೂ ಮನಭೇದವಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಲ್ಲಿ ಮನಸ್ಸಿನ ಭೇದವಿದೆ. ಅವರಿಬ್ಬರನ್ನೂ ಒಂದುಗೂಡಿಸಲು ರಾಹುಲ್‌ ಗಾಂಧಿ ಪರದಾಡುತ್ತಿದ್ದಾರೆ’ ಎಂದು ಅರುಣ್‌ ಸಿಂಗ್‌ ಟೀಕಿಸಿದರು.

‘ದೇಶ ಒಡೆದವರು ಕಾಂಗ್ರೆಸ್ಸಿಗರು. ರಾಹುಲ್‌ ಗಾಂಧಿ ಯಾವ ಉದ್ದೇಶಕ್ಕೆ ಭಾರತ್‌ ಜೋಡೊ ಯಾತ್ರೆ ಮಾಡುತ್ತಿದ್ದಾರೆ ಎಂದು ಅವರಿಗೇ ಗೊತ್ತಿಲ್ಲ. ಮೊದಲು ಕಾಂಗ್ರೆಸ್‌ನ ಇತಿಹಾಸ ಓದಿಕೊಂಡು ನಂತರ ‘ವಾಕಿಂಗ್‌’ ಮಾಡುವುದು ಒಳ್ಳೆಯದು’ ಎಂದು ಲೇವಡಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT