ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಭದ್ರತೆಗೆ ಆಯುಷ್ ವೈದ್ಯರ ಆಗ್ರಹ; ಪ್ರತಿಭಟನೆ, ಮುಖ್ಯಮಂತ್ರಿಗೆ ಮನವಿ

Last Updated 21 ಡಿಸೆಂಬರ್ 2018, 10:36 IST
ಅಕ್ಷರ ಗಾತ್ರ

ಬೆಳಗಾವಿ: ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ರಾಜ್ಯ ಗುತ್ತಿಗೆ ಆಯುಷ್ ವೈದ್ಯರ (ಜಿಡಿಎಂಒ ಎದುರು ಹುದ್ದೆ) ಸಂಘದ ಸದಸ್ಯರು ಶುಕ್ರವಾರ ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ರಾಜ್ಯದ ವಿವಿಧೆಡೆ 360 ಮಂದಿ ಕಾರ್ಯನಿರ್ವಹಿಸುತ್ತಿದ್ದೇವೆ. ಹಲವು ಬಾರಿ ಪ್ರಕಟಣೆ ನೀಡಿದರೂ, ಕೈತುಂಬಾ ಸಂಬಳ ಕೊಡುವುದಾಗಿ ತಿಳಿಸಿದರೂ ಎಂಬಿಬಿಎಸ್‌ ವೈದ್ಯರು ಹೋಗದಿರುವ ಸ್ಥಳಗಳಿಗೆ ತೆರಳಿ ನಾವು ಅಲ್ಲಿನ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ದೂರದ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿದ್ದರೆ ನಾವೇ. ಆದರೆ, ನಮಗೆ ಸರ್ಕಾರದಿಂದ ಸರಿಯಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರಿ ವೈದ್ಯರ ರೀತಿಯೇ ಕೆಲಸ ಮಾಡುತ್ತಿದ್ದರೂ ಅವರಿಗೆ ಸಿಗುತ್ತಿರುವ ವೇತನ ನಮಗೆ ಇಲ್ಲ’ ಎಂದು ಅಧ್ಯಕ್ಷ ಡಾ.ಕುಬೇರ ತಿಳಿಸಿದರು.

‘ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸಲಾಗುವುದು ಎಂದು ಜೆಡಿಎಸ್‌ನವರು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಈ ಮಾತಿನಂತೆ ನಡೆದುಕೊಂಡು ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

‘ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವರ್ಷಾನುಗಟ್ಟಲೆ ಖಾಲಿ ಇದ್ದ ಎಂಬಿಬಿಎಸ್‌ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಎದುರು ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನಮ್ಮನ್ನು ನಿಯುಕ್ತಿಗೊಳಿಸಲಾಗಿದೆ. ನಿಯುಕ್ತಿಗೊಂಡ ದಿನದಿಂದ ಇಲ್ಲಿವರೆಗೂ ಇಲಾಖೆಯಿಂದ ನೀಡಿದ ಕೆಲಸಗಳನ್ನು ಸಮರ್ಪಕವಾಗಿ ಮಾಡಿಕೊಂಡು ಬಂದಿದ್ದೇವೆ. ಇತ್ತೀಚೆಗೆ, ಸರ್ಕಾರಿ ಕೋಟಾದಲ್ಲಿ ಸೀಟು ಪಡೆದವರನ್ನು (ಎಂಬಿಬಿಎಸ್ ವೈದ್ಯರು, ಇಂಟರ್ನ್‌ಶಿಪ್‌, ಡಿಪ್ಲೊಮಾ, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ) ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜಿಸಿ ನಮ್ಮನ್ನು ಮರು ಹೊಂದಾಣಿಕೆ ಮಾಡದೇ, ಒಂದು ವಾರದೊಳಗೆ ಬಿಡುಗಡೆ ಮಾಡಲು ಆದೇಶಿಸಿರುವುದು ಖಂಡನಾರ್ಹ’ ಎಂದು ತಿಳಿಸಿದರು.

‘ಹಿಂದಿನ ಸರ್ಕಾರ ಸೇವಾ ಮರುಹೊಂದಾಣಿಕೆ ಮಾಡುವ ಅವಕಾಶ ಕಲ್ಪಿಸಿತ್ತು. ಆದರೆ, ಈಗಿನ ಸರ್ಕಾರ ಏಕಾಏಕಿ ನಮ್ಮ ಹಿತ ಕಡೆಗಣಿಸಿರುವುದು ಆಘಾತಕಾರಿಯಾಗಿದೆ. ಇದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಸೇವೆ ಮುಂದುವರಿಸಲು ಮರು ಹೊಂದಾಣಿಕೆ ಮೂಲಕ ಅವಕಾಶ ನೀಡಬೇಕು. ಸಮಾನ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಡಾ.ಸಿದ್ದಪ್ಪ, ಡಾ.ಪ್ರದೀಪ್, ಡಾ.ವಿನೋದ, ಡಾ.ಶಕುಂತಲಾ, ಡಾ.ಚಾಣಕ್ಯ, ಡಾ.ಬನಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT