ಬುಧವಾರ, ಸೆಪ್ಟೆಂಬರ್ 22, 2021
28 °C
ಈಡೇರದ ಪ್ರಮುಖ ಭರವಸೆಗಳು, ಹಲವು ಯೋಜನೆ ಘೋಷಣೆ

ಮುಖ್ಯಮಂತ್ರಿಯಾಗಿ ಬಿಎಸ್‌ವೈ ಪ್ರವಾಸ: ಬೆಳಗಾವಿಯಲ್ಲೇ ಆರಂಭ, ಅಂತ್ಯ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನದ ನಂತರ ಸರ್ಕಾರ ರಚಿಸಿದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕೈಗೊಂಡ ಮೊದಲ ಹಾಗೂ ಕೊನೆಯ ಪ್ರವಾಸ ಬೆಳಗಾವಿಯಲ್ಲೇ ಆದದ್ದು ವಿಶೇಷ.

ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿ ಉಂಟಾಗಿತ್ತು. ನೂರಾರು ಗ್ರಾಮಗಳು ಜಲಾವೃತವಾಗಿದ್ದವು. ‍ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ಅವರು 2019ರ ಆಗಸ್ಟ್‌ ಮೊದಲ ವಾರದಲ್ಲಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಸಂತ್ರಸ್ತರ ಅಳಲು ಆಲಿಸಿ, ಪರಿಹಾರ ಘೋಷಿಸಿದ್ದರು. ಆಗ ಸಚಿವ ಸಂಪುಟ ರಚನೆ ಆಗಿರಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಅವರಿಗೆ ಸಾಥ್‌ ನೀಡಿದ್ದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ, ಅವರ ಕೊನೆಯ ಪ್ರವಾಸವೂ ಬೆಳಗಾವಿಯಲ್ಲೇ ಆಯಿತು. ಈ ಬಾರಿಯೂ ಅವರು ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಅವಲೋಕನಕ್ಕೆ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೂ ಸಮಯ ವಿನಿಯೋಗಿಸಿದರು. ಆದರೆ, ಸಂತ್ರಸ್ತರಿಗೆ ಯಾವುದೇ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಲಿಲ್ಲ. ಅವರೊಂದಿಗೆ, ಈ ಭಾಗದ ಪ್ರಭಾವಿ ನಾಯಕರಾದ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಕಾಣಿಸಿಕೊಳ್ಳಲಿಲ್ಲ.

ಜ್ವರದಲ್ಲೂ ಪ್ರಚಾರ

ಮುಖ್ಯಮಂತ್ರಿಯಾಗಿ ಅವರು ಹಲವು ಬಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ದಿವಂಗತ ಸುರೇಶ ಅಂಗಡಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಏಪ್ರಿಲ್‌ನಲ್ಲಿ ನಡೆದ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯತಂತ್ರ ರೂಪಿಸಿದ್ದರು. ಕೋವಿಡ್–19 ಭೀತಿಯ ನಡುವೆ ಜ್ವರದಲ್ಲೂ ಪ್ರಚಾರ ನಡೆಸಿದ್ದರು. ಪಕ್ಷದ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಗೆಲುವಿಗೆ ಶ್ರಮಿಸಿದ್ದರು.

ಅವರ ಈಗಿನ ಸರ್ಕಾರದಲ್ಲಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಒಮ್ಮೆಯೂ ವಿಧಾನಮಂಡಲ ಅಧಿವೇಶನ ನಡೆಯಲಿಲ್ಲ. 2019ರಲ್ಲಿ ನೆರೆ ಮತ್ತು ಅತಿವೃಷ್ಟಿಯಿಂದ ಉಂಟಾಗಿದ್ದ ಹಾನಿಗೆ ಪರಿಹಾರ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿಕೊಳ್ಳಲೆಂದು ಮತ್ತು 2020ರಲ್ಲಿ ಕೋವಿಡ್ ಕಾರಣ ನೀಡಿ ಅಧಿವೇಶನ ನಡೆಸಲಿಲ್ಲ.

ಕೆಲವರಿಗೆ ಭೀತಿ, ಕೆಲವರಿಗೆ ಆಸೆ

ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಈ ಭಾಗದ ಸ್ವಾಮೀಜಿಗಳು ನಡೆಸಿದ ಸತ್ಯಾಗ್ರಹದಲ್ಲಿ ಆಹ್ವಾನ ಇಲ್ಲದಿದ್ದರೂ ಭಾಗವಹಿಸಿದ್ದ ಅವರು, ರಾಜ್ಯ ಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು. ಕೆಲವು ಕಚೇರಿಗಳು ಬಂದಿವೆ. ಆದರೆ, ಪ್ರಮುಖ ಕಚೇರಿಗಳ ಸ್ಥಳಾಂತರದ ಭರವಸೆಯನ್ನು ಎರಡು ವರ್ಷಗಳು ಅಧಿಕಾರದಲ್ಲಿದ್ದರೂ ಈಡೇರಿಸಲು ಅವರಿಗೆ ಆಗಲಿಲ್ಲ.

ಈ ಬಾರಿ ವಿಧಾನಮಂಡಲ ಮಳೆಗಾಲದ (ಮುಂಗಾರು) ಅಧಿವೇಶನ ನಡೆಸುವಂತೆ ಯಡಿಯೂರಪ್ಪ ಅವರ ಮೇಲೆ ಸ್ವಪಕ್ಷೀಯರೂ ಸೇರಿದಂತೆ ಈ ಭಾಗದ ನಾಯಕರು ಒತ್ತಡ ಹಾಕಿದ್ದರು. ಈ ನಡುವೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ.

ಇದರೊಂದಿಗೆ ಇಲ್ಲಿರುವ ಅವರ ಬಣದಲ್ಲಿ ಗುರುತಿಸಿಕೊಂಡವರು ಅಥವಾ ಬೆಂಬಲಿಗರು ಕೂಡ ವಿವಿಧ ನಿಗಮ–ಮಂಡಳಿಗಳಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದಾರೆ.

ನೂತನ ಮುಖ್ಯಮಂತ್ರಿಯ ನೇತೃತ್ವದಲ್ಲಿ ತಮಗೆ ಸರ್ಕಾರದಲ್ಲಿ ಯಾವುದಾದರೂ ಅಧಿಕಾರ ಸಿಗಬಹುದೇ ಎಂಬ ಆಸೆಯು ಪಕ್ಷದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಜೊತೆ ನಂಟು ಹೊಂದಿದವರದಾಗಿದೆ.

ಸಚಿವ ಸಂ‍ಪುಟದಲ್ಲಿ ಸ್ಥಾನ ಕಳೆದುಕೊಳ್ಳುವವರಾರು ಮತ್ತು ಪಡೆದುಕೊಳ್ಳುವವರು ಎನ್ನುವ ಕುತೂಹಲವೂ ಉಂಟಾಗಿದೆ. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಬಿಜೆಪಿ ಸೇರಿದ ಶಾಸಕ ರಮೇಶ ಜಾರಕಿಹೊಳಿ ಸೇರಿದಂತೆ ಹಲವರ ನಡೆ ಅಥವಾ ಭವಿಷ್ಯ ಏನಾಗಿರಲಿದೆ ಎನ್ನುವುದೂ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:  ಸಿ.ಎಂ. ಬದಲಾವಣೆಯಿಂದ ರಾಜ್ಯಕ್ಕೆ ಪ್ರಯೋಜನವಿಲ್ಲ: ಸಿದ್ದರಾಮಯ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು