ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರೇ ಮೇಲ್ವಿಚಾರಣೆ ಸಮಿತಿ ರಚಿಸಿಕೊಳ್ಳಲಿ’‌

ಬಾಗಿನ ಅರ್ಪಿಸಿದ ಅಶೋಕ ಚಂದರಗಿ ಸಲಹೆ
Last Updated 25 ಜೂನ್ 2019, 16:03 IST
ಅಕ್ಷರ ಗಾತ್ರ

ಅಥಣಿ: ‘ಕೃಷ್ಣಾ ತೀರದ ಜನರ ಕುಡಿಯುವ ನೀರಿನ ಸಂಕಷ್ಟಗಳನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ–ಮಹಾರಾಷ್ಟ್ರ ನದಿ ನೀರು ನಿರ್ವಹಣಾ ಮೇಲ್ವಿಚಾರಣೆ ಸಮಿತಿಯೊಂದನ್ನು ಮಠಾಧೀಶರ ನೇತೃತ್ವದಲ್ಲಿ ರೈತರೇ ರಚಿಸಿಕೊಳ್ಳುವದು ಸೂಕ್ತ ಪರಿಹಾರವಾಗಬಲ್ಲದು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರು ಅಥಣಿ ತಾಲ್ಲೂಕಿನ ದರೂರು ಸೇತುವೆ ತಲುಪಿದ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಮಂಗಳವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

‘ಚಿಕ್ಕೋಡಿ, ಅಥಣಿ ಮತ್ತು ರಾಯಬಾಗ ತಾಲ್ಲೂಕುಗಳ ರೈತರು ಮತ್ತು ಸಾರ್ವಜನಿಕರು ಮೂರು ತಿಂಗಳಿಂದ ಕುಡಿಯುವ ನೀರಿನ ತೀವ್ರ ಅಭಾವದಿಂದ ಸಂಕಷ್ಟಕ್ಕೆ ಒಳಗಾದರೂ ರಾಜ್ಯ ಸರ್ಕಾರವು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆಗೆ ಗಂಭೀರ ಪ್ರಯತ್ನ ಮಾಡಲಿಲ್ಲ. ಕೊಲ್ಹಾಪುರ ಸುತ್ತಮುತ್ತ ಭಾರಿ ಮಳೆ ಸುರಿದಿದ್ದರಿಂದ ರಾಜಾಪುರ ಬ್ಯಾರೇಜ್‌ನಿಂದ ಅನಿವಾರ್ಯವಾಗಿ ಬಿಟ್ಟ ನೀರು 60 ಕಿ.ಮೀ. ಸಾಗಿ ದರೂರು ಸೇತುವೆ ದಾಟಿ ಹರಿಯುತ್ತಿದೆ. ನೀರಿನ ಸಮಸ್ಯೆ ಮುಂದಿನ ವರ್ಷವೂ ಪುನರಾವರ್ತನೆ ಆಗಬಾರದು. ಇದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಕೊಲ್ಹಾಪುರ ಜಿಲ್ಲೆಯ ಶಿರೋಳ ಶಾಸಕ ಉಲ್ಲಾಸರಾವ್‌ ಪಾಟೀಲ ಸ್ವತಃ ರಾಜಾಪುರ ಬ್ಯಾರೇಜ್ ಗೇಟ್‌ ತೆಗೆದು ಒಮ್ಮೆ ನೀರು ಬಿಡಿಸಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಕೃಷ್ಣಾ ತೀರದ ಜನಪ್ರತಿನಿಧಿಗಳು, ರೈತರನ್ನು ಒಳಗೊಂಡ ಸಮಿತಿಯನ್ನು ಮಠಾಧೀಶರ ಮಾರ್ಗದರ್ಶನದಲ್ಲಿ ರಚಿಸಿಕೊಂಡರೆ ಬೇಸಿಗೆಯಲ್ಲಿ ನದಿಗಳ ನೀರು ನಿರ್ವಹಣಾ ಮೇಲ್ವಿಚಾರಣೆ ಕೈಗೊಳ್ಳಬಹುದಾಗಿದೆ’ ಎಂದರು.

ನದಿಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ದರೂರು ಸೇತುವೆ ತಲುಪಿದ್ದು ನೀರಲ್ಲ, ಹಾಲು. ಇದನ್ನು ಹಾಲಿನಂತೆಯೇ ಬಳಸಬೇಕು’ ಎಂದು ಸಲಹೆ ನೀಡಿದರು.

ಭಾರತೀಯ ಕಿಸಾನ್ ಸಂಘದ ಭರಮು ನಾಯಕ, ಮುಖಂಡರಾದ ಅಶೋಕ ದಾನಗೌಡರ, ಸಿದ್ದಾರೂಢ ಮಠಪತಿ, ದುಂಡಪ್ಪ ಅವಟಿ, ಬಸವಾರಾಜ ಖೇಮಲಾಪುರ, ಶಿವಪ್ಪ ಶಮರಂತ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಜಿಲ್ಲಾ ಘಟಕದ ಅಧ್ಯಕ್ಷೆ ಯಶೋದಾ ಬಿರಡಿ, ಸತ್ತೆವ್ವ ತಹಶೀಲ್ದಾರ, ಸ್ಥಳೀಯರಾದ ವೀರೇಂದ್ರ ಗೋಬರಿ, ಶಿವಾನಂದ ಸದಲಗಾ, ದರ್ಶನ್ ಶೆಟ್ಟಿ, ಅಭಿನವ ಉಪಾಧ್ಯೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT