ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ: ದರ್ಗಾದಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ

Last Updated 1 ಸೆಪ್ಟೆಂಬರ್ 2022, 9:13 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪ್ರತಿಬಾರಿಯಂತೆ ಈ ವರ್ಷವೂ ಪಟ್ಟಣದ ದರ್ಗಾದಲ್ಲಿ ಹಿಂದೂ ಮುಸ್ಲಿಮರು ಸೇರಿಕೊಂಡು ವಿಘ್ನನಿವಾರಕನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಆಲಕಟ್ಟಿ ಫಕ್ಕೀರಸ್ವಾಮಿ ದರ್ಗಾ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿ ನಿಂತಿದೆ.

ಸಂಪ್ರದಾಯದಂತೆ ಬುಧವಾರ ಗಣಪನ ಮೂರ್ತಿಯನ್ನು ಹಿಂದೂ ಮುಸ್ಲಿಮ್ ಯುವಕರು ಮೆರವಣಿಗೆ ಮೂಲಕ ತಂದು ದರ್ಗಾದಲ್ಲಿ ಪ್ರತಿಸ್ಥಾಪನೆ ಮಾಡಿದರು.

ಮುಸ್ಲಿಮರು ಗಣಪನಿಗೆ ಹೂವು ಮಾಲೆ ಹಾಕಿ, ಕಾಯಿ, ಕರ್ಪೂರ ಬೆಳಗಿದರು, ಹಿಂದೂಗಳು ಆರತಿ ಮಾಡಿ, ನೈವೇದ್ಯ ಸಲ್ಲಿಸಿದರು.

ಅರ್ಚಕರು ಬೋಧಿಸಿದ ಮಂತ್ರ ಘೋಷವನ್ನು ಮುಸ್ಲಿಂ ಯುವಕರು ಭಕ್ತಿಯಿಂದ ಹೇಳಿ ಸಂಭ್ರಮಿಸಿದರು, ಗಜಾನನ ಮಹರಾಜಕೀ ಜೈ ಎಂದು ಘೋಷಣೆ ಹಾಕಿದರು.

ಸ್ವಾತಂತ್ರ್ಯ ಪೂರ್ವದ ಪದ್ಧತಿ:ಕೋಮು ಸೌಹಾರ್ದಕ್ಕೆ ಹೆಸರಾಗಿರುವ ಬೈಲಹೊಂಗಲ ಪಟ್ಟಣದಲ್ಲಿ ಹಿಂದೂ, ಮುಸ್ಲಿಮರು ಒಟ್ಟಿಗೆ ಸೇರಿ ವಿಘ್ನನಿವಾರಕಗಣಪನ ಮೂರ್ತಿ ಪ್ರತಿಷ್ಠಾಪಿಸುವುದು ಇಂದು ನಿನ್ನೆಯ ಕತೆಯಲ್ಲ.

ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಕಂಠಿ ಗಲ್ಲಿಯಲ್ಲಿರುವ ನಿವಾಸಿಗಳು ಪ್ರತಿ ವರ್ಷ ಎಲ್ಲ ಹಬ್ಬವನ್ನು ಒಂದಾಗಿ ಆಚರಿಸುತ್ತ ಬಂದಿದ್ದಾರೆ.

ಹಿಂದೂಗಳು ಮೊಹರಂ ಆಚರಣೆ ಮಾಡುವ ಮೂಲಕ ಭಾವೈಕ್ಯದ ಹೆಜ್ಜೆ ಇಡುತ್ತ ಬಂದಿದ್ದಾರೆ. ಮುಸ್ಲಿಮರು ಅದಕ್ಕೂ ಒಂದು ಹೆಜ್ಜೆ ಮುಂದೆ ಬಂದು ದರ್ಗಾದೊಳಗೇ ಗಣೇಶನ ಮೂರ್ತಿ ಪೂಜಿಸಿ ಚತುರ್ಥಿಯನ್ನು ಅಷ್ಟೇ ನಯ, ವಿನಯ, ಭಕ್ತಿಭಾವದಿಂದ ಆಚರಿಸುತ್ತಾರೆ.

ಮೂರ್ತಿ ವಿಸರ್ಜನೆ ದಿನವೂ ಒಟ್ಟಿಗೆ ಮೆರವಣಿಗೆ ಮೂಲಕ ತೆರಳುವುದು ಇನ್ನೊಂದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT