ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಮ್ಮನ ಗುಡ್ಡ: ದೂರದಿಂದಲೇ ನಮಿಸಿದ ಭಕ್ತರು

Last Updated 28 ಜನವರಿ 2021, 14:59 IST
ಅಕ್ಷರ ಗಾತ್ರ

ಉಗರಗೋಳ (ಸವದತ್ತಿ ತಾಲ್ಲೂಕು): ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಸವದತ್ತಿ ಯಲ್ಲಮ್ಮನ ದೇವಸ್ಥಾನ ಪ್ರವೇಶಕ್ಕೆ ನಿಷೇಧಿಸಿದ್ದರೂ, ಬನದ ಹುಣ್ಣಿಮೆ ಜಾತ್ರೆಗಾಗಿ ಭಕ್ತರು ಬರುವುದು ನಿಂತಿಲ್ಲ.

ಬನದ ಹುಣ್ಣಿಮೆ ಅಂಗವಾಗಿ ಸವದತ್ತಿಗೆ ಭಕ್ತರು ದಂಡು ದಂಡಾಗಿ ಬರುತ್ತಿದ್ದಾರೆ. ಹೀಗಾಗಿ, ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಾದ ಚುಳಕಿ, ಹಿರೇಕುಂಬಿ, ಉಗರಗೋಳ ಗ್ರಾಮಗಳ ಮುಖ್ಯ ರಸ್ತೆಗಳಲ್ಲೆ ಬ್ಯಾರಿಕೇಡ್ ಅಳವಡಿಸಿ ಭಕ್ತರು ಗುಡ್ಡಕ್ಕೆ ತೆರಳದಂತೆ ಪೊಲೀಸರು ತಡೆಯುತ್ತಿದ್ದಾರೆ. ಆದ್ದರಿಂದ ಭಕ್ತರು ದೂರದಲ್ಲೇ ಒಲೆ ಹೂಡಿ ದೇವಿಗೆ ನೈವೇದ್ಯ ಅರ್ಪಿಸುತ್ತಿದ್ದಾರೆ. ಗ್ರಾಮದ ಪಕ್ಕದ ಕೃಷಿ ಜಮೀನುಗಳಲ್ಲಿ ಧಾರ್ಮಿಕ ಕಾರ್ಯ ಕೈಗೊಂಡು, ಭಕ್ತಿ ಸಮರ್ಪಿಸುತ್ತಿದ್ದಾರೆ. ಗ್ರಾಮಗಳಲ್ಲೀಗ ಜಾತ್ರಾ ಸಂಭ್ರಮ ಮನೆ ಮಾಡಿದ್ದು, ಅಲ್ಲಿ ಭಂಡಾರದ ಘಮಲು ಪಸರಿಸಿದೆ.

ಪ್ರತಿ ವರ್ಷ ಬನದ ಹುಣ್ಣಿಮೆ ಸಂದರ್ಭ ಯಲ್ಲಮ್ಮನಗುಡ್ಡದಲ್ಲಿ ಬೃಹತ್ ಜಾತ್ರೆ ಜರುಗುತ್ತಿತ್ತು. ಜಾತ್ರೆ ಆರಂಭಕ್ಕೂ ಮುನ್ನಾ ದಿನವೆ, ಗುಡ್ಡದತ್ತ ಲಕ್ಷಾಂತರ ಭಕ್ತರು ಬರುತ್ತಿದ್ದರು. ಜಾತ್ರೆಯಂದು ಎಂಟು ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಿದ್ದರು. ಏಳುಕೊಳ್ಳದ ನಾಡು ಭಕ್ತಸಾಗರದಲ್ಲಿ ಮಿಂದೇಳುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಜ. 31ರವರೆಗೆ ದೇವಸ್ಥಾನ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಪರಿಣಾಮ, ಯಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ಬನದ ಹುಣ್ಣಿಮೆಯನ್ನು ಸರಳವಾಗಿ ಆಚರಿಸಲಾಯಿತು. ಬೆಳಿಗ್ಗೆ ಮತ್ತು ಸಂಜೆ ದೇವಿಗೆ ವಿಶೇಷ ಪೂಜೆ, ನೈವೇದ್ಯ ಸಲ್ಲಿಸಲಾಯಿತು. ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅರ್ಚಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT