ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳವಣಿಗೆಗೆ ಕಂಟಕವಾದ ‘ಅನುತ್ಪಾದಕ ಸಾಲ’

ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಕಾಮತ್‌ ಕಳವಳ
Last Updated 6 ಅಕ್ಟೋಬರ್ 2019, 15:49 IST
ಅಕ್ಷರ ಗಾತ್ರ

ಬೆಳಗಾವಿ: ‘ಸದ್ಯದ ಪರಿಸ್ಥಿತಿಯಲ್ಲಿ ‘ಅನುತ್ಪಾದಕ ಸಾಲ’ ಬ್ಯಾಂಕ್‌ ಬೆಳವಣಿಗೆಗೆ ದೊಡ್ಡ ಕಂಟಕವಾಗಿ ಪರಿಣಮಿಸಿವೆ’ ಎಂದು ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಸತೀಶ ಕಾಮತ್‌ ಕಳವಳ ವ್ಯಕ್ತಪಡಿಸಿದರು.

ಸಿಂಡಿಕೇಟ್‌ ಬ್ಯಾಂಕ್‌ ಹಾಗೂ ವಿವಿಧ ಬ್ಯಾಂಕ್‍ಗಳ ಸಹಯೋಗದಲ್ಲಿ ಇಲ್ಲಿ ಶನಿವಾರ ನಡೆದ ಗ್ರಾಹಕರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಲವನ್ನು ಮರುಪಾವತಿಸಿ ಬ್ಯಾಂಕ್‌ನ ವ್ಯವಹಾರಗಳು ಸುಲಭವಾಗಿ ನಡೆಯಲು ಗ್ರಾಹಕರು ಸಹಕರಿಸಬೇಕು. ಗ್ರಾಹಕರ ಹಣವನ್ನೇ ಮೂಲ ಆಧಾರವಾಗಿಟ್ಟುಕೊಂಡು ಬ್ಯಾಂಕುಗಳು ವ್ಯವಹಾರ ನಡೆಸುತ್ತವೆ ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.

‘ಗ್ರಾಹಕರ ಅಗತ್ಯಗಳನ್ನು ಪೂರೈಸಲು ಹಣಕಾಸಿನ ವ್ಯವಸ್ಥೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಕೃಷಿ ಉತ್ಪಾದನಾ ಚಟುವಟಿಕೆ, ಸೇವಾ ಕ್ಷೇತ್ರ, ಮನೆಯ ಸಾಲದ ಅಗತ್ಯ, ಸ್ವ ಸಹಾಯದ ಅವಶ್ಯ ಮೊದಲಾದವುಗಳನ್ನು ಗುರುತಿಸಿ ಗ್ರಾಹಕರಿಗೆ ಸಾಲ ಒದಗಿಸಬೇಕು. ಈ ನಿಟ್ಟಿನಲ್ಲಿ ‘ಮುದ್ರಾ’ ಯೋಜನೆಯು ಸಹಕಾರಿಯಾಗಿದೆ’ ಎಂದರು.

ಮಹತ್ವದ ಪಾತ್ರ: ‘ವಿದ್ಯುನ್ಮಾನ ಬ್ಯಾಂಕಿಂಗ್ ವ್ಯವಸ್ಥೆಯು ಇಂದು ಮಹತ್ವದ ಪಾತ್ರ ವಹಿಸುತ್ತಿದೆ. ಬ್ಯಾಂಕ್‌ನ ಅನೇಕ ಭಾರಗಳನ್ನು ಗಣನೀಯವಾಗಿ ತಗ್ಗಿಸಿದೆ. ಅಂತರ್ಜಾಲ ವ್ಯವಸ್ಥೆಯ ಬ್ಯಾಂಕಿಂಗ್, ಎಟಿಎಂ, ಮೊಬೈಲ್ ಬ್ಯಾಂಕಿಂಗ್‌ ಪ್ರಗತಿಗೆ ಸಹಕರಿಸುತ್ತಿವೆ’ ಎಂದು ತಿಳಿಸಿದರು.

ಮಣಿಪಾಲ ಕ್ಷೇತ್ರದ ಸಹಾಯಕ ಮಹಾಪ್ರಬಂಧಕ ಲೀನಾ ಪಿಂಟೊ, ‘ಹೆಚ್ಚಿನ ಸಾಲ ವಿತರಣೆಯಿಂದ ಹಣಕಾಸಿನ ಬೆಳವಣಿಗೆ ಆಗುತ್ತದೆ. ಇದರಿಂದ ರಾಷ್ಟ್ರದ ಜಿಡಿಪಿ ಹೆಚ್ಚಿ ಉದ್ಯೋಗ ಸೃಷ್ಟಿ ಮತ್ತು ಅಂತರ್ಜಾಲ ಬ್ಯಾಂಕ್‌ನ ವ್ಯವಸ್ಥೆಯೂ ಹೆಚ್ಚಾಗುತ್ತದೆ’ ಎಂದು ಪ್ರತಿಪಾದಿಸಿದರು.

ಕಾರ್ಪೊರೇಷನ್ ಬ್ಯಾಂಕ್‌ ಸಹಾಯಕ ಮಹಾಪ್ರಬಂಧಕ ರವಿಂದ್ರ ಮಾತನಾಡಿ, ‘ಹಿಂದೆ ಹಿರಿಯ ನಾಗರಿಕರಿಗೆ ಮಾಸಾಶಸ ತಲುಪಿಸಲು ಪೋಸ್ಟ್‌ಮನ್‌ಗಳನ್ನು ಕಾಯಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಅವರವರ ಖಾತೆಗಳಿಗೆ ಅಂತರ್ಜಾಲದ ಮೂಲಕ ನೇರವಾಗಿ ಹಣ ಜಮಾ ಆಗುವದರಿಂದ, ಸಂದೇಶಗಳು ಬರುವುದರಿಂದ ಅನುಕೂಲವಾಗಿದೆ. ಬ್ಯಾಂಕ್‌ ಹಾಗೂ ಫಲಾನುಭವಿಗಳಿಗೆ ದೊಡ್ಡ ತಲೆ ಭಾರ ಇಳಿದಿದೆ’ ಎಂದು ಹೇಳಿದರು.

ಸಾಲಪತ್ರಗಳ ವಿತರಣೆ:ಸ್ಟೇಟ್ ಬ್ಯಾಂಕ್‌ ವಲಯ ಪ್ರಬಂಧಕ ಆರ್.ಜಿ. ಕುಲಕರ್ಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜು, ಕೆನರಾ ಬ್ಯಾಂಕ್‌ ಪ್ರಾದೇಶಿಕ ಪ್ರಬಂಧಕ ಕೃಷ್ಣ ಕುಲಕರ್ಣಿ ಮಾತನಾಡಿದರು. ಗ್ರಾಹಕರಿಗೆ ಸಾಲ ಬಿಡುಗಡೆ ಪತ್ರಗಳನ್ನು ವಿತರಿಸಲಾಯಿತು. ‘ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ’ದವರು ‘ಆರ್ಥಿಕ ಸಾಕ್ಷರತೆ’ ಬಗ್ಗೆ ಕಿರು ನಾಟಕ ಪ್ರಸ್ತುತಪಡಿಸಿದರು.

ವಲಯ ಪ್ರಬಂಧಕ ಭಾಸ್ಕರ ಮೆನನ್ ರಾಜನ್ ಮತ್ತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಪ್ರಬಂಧಕ ವಿ. ರಾಹುಲ್‌ ಸ್ವಾಗತಿಸಿದರು. ಬಿ. ನಾಗರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT