ಬೈಲಹೊಂಗಲ: ‘ಗುರು ಬಸವೇಶ್ವರರ ಸಂದೇಶಗಳು ಸಾರ್ವಕಾಲಿಕವಾಗಿವೆ. ವಚನಗಳ ಸಾರ ನಿತ್ಯ ಜೊತೆಯಲ್ಲಿದ್ದರೆ ಜೀವನ ಪಾವನವಾಗಲಿದ್ದು, ಪೋಷಕರು ಮಕ್ಕಳಿಗೆ ಸದಾ ಸಂಪ್ರದಾಯ, ಸಂಸ್ಕಾರ ಕಲಿಸಿ ಜಾಗೃತರನ್ನಾಗಿಸಬೇಕು’ ಎಂದು ಗದಗ-ಡಂಬಳ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಉಡಕೇರಿ ಗ್ರಾಮದಲ್ಲಿ ಗುರುವಾರ ನಡೆದ ವಿಶ್ವಗುರು ಬಸವೇಶ್ವರರ ಅಶ್ವಾರೂಢ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಸವೇಶ್ವರ ಕಂಚಿನ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ,‘12 ನೇ ಶತಮಾನದಲ್ಲಿ ಸಮಾನತೆ ಸಂದೇಶ ಸಾರಿದ ಶರಣರನ್ನು ಪ್ರತಿಯೊಬ್ಬರು ಆರಾಧಿಸುವ ನಿಟ್ಟಿನಲ್ಲಿ ನಾಡಿನ ಪ್ರತಿಯೊಂದು ಗ್ರಾಮಗಳಲ್ಲಿ ಬಸವೇಶ್ವರರ ಅಶ್ವಾರೂಢ ಮೂರ್ತಿ ಪ್ರತಿಷ್ಠಾಪನೆಯಾಗಬೇಕು. ಬಸವ ಪರ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿ ಆ ಮೂಲಕ ಜನ ಜಾಗೃತಿಯಾಗಬೇಕು’ ಎಂದರು.
ಗ್ರಾಮದ ನಾಗರಿಕರಿಂದ ಬಸವೇಶ್ವರರ ಭಾವಚಿತ್ರ ಹಾಗೂ ಶರಣೆಯರಿಂದ ವಚನ ಸಾಹಿತ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ್ಯೆ ಪೇಮಾ ಅಂಗಡಿ ಬಸವಾದಿ ಶರಣರ ಕುರಿತು ಉಪನ್ಯಾಸ ನೀಡಿದರು. ನಂತರ ಮಹಾಪ್ರಸಾದ ನಡೆಯಿತು.
ತೋಂಟದ ಡಾ.ಸಿದ್ದರಾಮ ಸ್ವಾಮೀಜಿ ಅವರಿಂದ ಇಷ್ಟಲಿಂಗ ಪೂಜೆ, ಮಕ್ಕಳಿಗೆ ಲಿಂಗದೀಕ್ಷೆ ಕಾರ್ಯಕ್ರಮ ಭಕ್ತಿ-ಭಾವಗಳಿಂದ ನಡೆಯಿತು. ರಾಮಲಿಂಗೇಶ್ವರ ಪ್ರೌಢಶಾಲೆ ಅಧ್ಯಕ್ಷ ರಾಜು ಬೋಳಶೆಟ್ಟಿ ಷಟಸ್ಥಳ ಧ್ವಜಾರೋಹಣ ನೆರವೇರಿಸಿದರು. ಚಂದ್ರು ಮೇಟ್ಯಾಳ ಸ್ವಾಗತಿಸಿದರು. ಉಮೇಶ ಹಿತ್ತಲಮನಿ ನಿರೂಪಿಸಿದರು. ಗ್ರಾಮಸ್ಥರು ಪಾಲ್ಗೊಂಡಿದ್ದರು.