ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3: ಚಂದ್ರಯಾನ ತಂಡದಲ್ಲಿ ಬೆಳಗಾವಿಯ ವಿಜ್ಞಾನಿಗಳು

Published 23 ಆಗಸ್ಟ್ 2023, 16:46 IST
Last Updated 23 ಆಗಸ್ಟ್ 2023, 16:46 IST
ಅಕ್ಷರ ಗಾತ್ರ

ಬೆಳಗಾವಿ: ‘ಚಂದ್ರಯಾನ–3’ ಯಶಸ್ಸಿನೊಂದಿಗೆ ಬೆಳಗಾವಿಯೂ ಐತಿಹಾಸಿಕ ಪುಟ ತೆರೆಯಿತು. ಈ ಗಗನನೌಕೆಯು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲು ಬೇಕಾದ ಸಲಕರಣೆಗಳನ್ನು ಬೆಳಗಾವಿಗರೇ ಸಿದ್ಧಪಡಿಸಿದ್ದಾರೆ. ಜಿಲ್ಲೆಯ ಇಬ್ಬರು ವಿಜ್ಞಾನಿಗಳು ಕೂಡ ಈ ತಂಡದ ಸದಸ್ಯರಾಗಿದ್ದಾರೆ.

ಇಲ್ಲಿನ ಸರ್ವೊ ಕಂಟ್ರೋಲ್ಸ್‌ ಏರೋಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ ಸಿದ್ಧಪಡಿಸಿದ ಬಿಡಿ ಭಾಗಗಳು ಈ ಖಗೋಳಯಾನದ ಪೂರ್ಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಗಗನನೌಕೆಯಲ್ಲಿ ಬಳಸಿದ ಹೈಡ್ರಾಲಿಕ್‌ ಉಪಕರಣ, ವಾಲ್ವ್‌ಗಳು, ಸ್ಪೂಲ್ಸ್‌, ಸ್ಲೀವ್ಸ್‌, ಮ್ಯಾನಿಫೋಲ್ಡ್‌ ಬ್ಲಾಕ್ಸ್, ಎಲೆಕ್ಟ್ರಾನಿಕ್‌ ಸೆನ್ಸರ್‌ಗಳನ್ನು ಇದೇ ಕಂಪನಿಯಿಂದ ರವಾನಿಸಲಾಗಿದೆ.

‘ನೌಕೆಯನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಸುವಲ್ಲಿ ಈ ಉಪಕರಣಗಳ ಪಾತ್ರ ಮಹತ್ವದ್ದು. ಚಂದ್ರಸ್ಪರ್ಶ ಮಾಡಿದ್ದು ಒಂದು ಅಭೂತಪೂರ್ವ ಕ್ಷಣ. ಯಂತ್ರಗಳು ನೌಕೆಯಿಂದ ಹೊರಬಂದು ಹೇಗೆ ಕೆಲಸ ಮಾಡುತ್ತವೆ ಎಂಬುದು ಮುಂದಿನ ಕುತೂಹಲ’ ಎಂದು ಕಂಪನಿಯ ಮಾಲೀಕ, ವ್ಯವಸ್ಥಾಪಕ ನಿರ್ದೇಶಕರೂ ಆದ ದೀಪಕ್‌ ಧಡೋತಿ ತಿಳಿಸಿದರು.

ಹೈಡ್ರಾಲಿಕ್‌ ಉಪಕರಣವು ಗಗನನೌಕೆಯ ಪಥ ನಿರ್ವಹಣೆ (ನಾಜಲ್‌ ಕಂಟ್ರೋಲ್‌) ಮಾಡಲು ಸಹಕರಿಸುವ ಕೆಲಸ ಮಾಡಿತು. ನೌಕೆಯು ಚಂದ್ರನ ಕಕ್ಷೆಯಲ್ಲಿ ಸುತ್ತುವಾಗ ಹಾಗೂ ನೌಕೆಯಿಂದ ರೋವರ್‌ ಚಂದ್ರನ ಮೇಲೆ ಇಳಿಯುವಾಗ ಸೆನ್ಸರ್‌ ಉಪಕರಣ ಕೆಲಸ ಮಾಡಿತು ಎಂದರು. ಇದೇ ಕಂಪನಿಯು ಚಂದ್ರಯಾನ–2 ಹಾಗೂ ಮಂಗಳಯಾನಕ್ಕೂ ಬಿಡಿಭಾಗಗಳನ್ನು ಪೂರೈಸಿತ್ತು. 15 ವರ್ಷಗಳಿಂದ ‘ಇಸ್ರೊ’ ಸಂಸ್ಥೆಯೊಂದಿಗೆ ಈ ಕಂಪನಿ ಹೆಜ್ಜೆ ಇಡುತ್ತಿದೆ.

ಹಿರಿಮೆ ತಂದ ಇಬ್ಬರು ವಿಜ್ಞಾನಿಗಳು:

ಖಾನಾಪುರ ತಾಲ್ಲೂಕಿನ ಕಾಪೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಗಡಿ ಗ್ರಾಮದ ಯುವ ವಿಜ್ಞಾನಿ ಪ್ರಕಾಶ ನಾರಾಯಣ ಪಡಣೇಕರ ಹಾಗೂ ಗೋಕಾಕ ತಾಲ್ಲೂಕಿನ ಮಮದಾಪುರ ಗ್ರಾಮದ ಶಿವಾನಂದ ಮಲಪ್ಪ ಕಮತ ಚಂದ್ರಯಾನ–3ರ ಸಾಧಕರ ತಂಡದಲ್ಲಿದ್ದಾರೆ.

ಪ್ರಕಾಶ ಪಡಣೇಕರ 2019ರಿಂದ ಇಸ್ರೊದಲ್ಲಿದ್ದಾರೆ. 32ರ ಪ್ರಾಯದ ಈ ಅಂತರಿಕ್ಷ ವಿಜ್ಞಾನಿಯ ತಂದೆ–ತಾಯಿ ಕೃಷಿಕರು. ಕಾಡುಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಈ ಯುವಕ, ಶಿಕ್ಷಣವನ್ನೂ ಬೆಳಗಾವಿಯಲ್ಲಿ ಪೂರೈಸಿದ್ದಾರೆ. ಚಂದ್ರಯಾನ–2ರಲ್ಲೂ ಅವರು ಕೆಲಸ ಮಾಡಿದ್ದಾರೆ.

52 ವರ್ಷದ ವಿಜ್ಞಾನಿ ಶಿವಾನಂದ ಮಲ್ಲಪ್ಪ ಕಮತ ಬಡ ಕುಟುಂಬದಲ್ಲಿ ಹುಟ್ಟಿ, ಬೆಳೆದವರು. ಹಳ್ಳಿಯಲ್ಲೇ ಆರಂಭಿಕ ಶಿಕ್ಷಣ ಪೂರೈಸಿ, ಬೆಳಗಾವಿಯ ಜಿಐಟಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಹಲವು ವರ್ಷಗಳಿಂದ ಇಸ್ರೊದ ವಿಜ್ಞಾನಿಗಳ ತಂಡದ ಸಕ್ರಿಯ ಸದಸ್ಯರಾಗಿದ್ದಾರೆ.

ಇದನ್ನೂ ಓದಿ..

Chandrayaan-3: ‘ವಿಕ್ರಮ ಪರಾಕ್ರಮ’ದಲ್ಲಿ ನಾಗಮಂಗಲದ ಯುವ ವಿಜ್ಞಾನಿ ರವಿ ಟಿ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT