ಜಲಯೋಗ ಸಾಧಕಿ; ವಿವಿಧ ಆಸನಗಳಲ್ಲಿ ಪ್ರವೀಣೆ

ಭಾನುವಾರ, ಏಪ್ರಿಲ್ 21, 2019
24 °C
ಗುಳೇದಗುಡ್ಡ ಗ್ರಾಮದ ಈಜು ಶಿಕ್ಷಣ ಶಿಕ್ಷಕಿ ಶ್ರೀದೇವಿ

ಜಲಯೋಗ ಸಾಧಕಿ; ವಿವಿಧ ಆಸನಗಳಲ್ಲಿ ಪ್ರವೀಣೆ

Published:
Updated:
Prajavani

ಚನ್ನಮ್ಮನ ಕಿತ್ತೂರು: ನೆಲದ ಮೇಲೆ ಕೈ, ಕಾಲು ಮತ್ತು ಮೈ ಮಣಿಸಿ ಪದ್ಮಾಸನ, ಮತ್ಸ್ಯಾಸನದಂತಹ ಯೋಗಾಸನ ಸರಿಯಾಗಿ ಮಾಡುವುದೇ ಕಷ್ಟ, ಇಂಥದ್ದರಲ್ಲಿ ನೀರಿನ ಮೇಲೆ ಯೋಗಾಸನ ಮಾಡುವುದುಂಟೆ? ಹೌದು, ಇವರು ಮಾಡುತ್ತಾರೆ. ನೀರಿನಲ್ಲಿ ಸಲೀಸಾಗಿ ವಿವಿಧ ಭಂಗಿಯ ಸುಮಾರು 90 ಆಸನ ಮಾಡುವ ರೂಢಿಯನ್ನು ಮೈಗೂಡಿಸಿಕೊಂಡಿದ್ದಾರೆ ಶ್ರೀದೇವಿ ಅರ್ಜುನ ಮಿರಜಕರ್ ಅವರು.

ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಗ್ರಾಮದ ಶ್ರೀದೇವಿ ಅವರು ಕಿತ್ತೂರಿನಲ್ಲಿರುವ ರಾಣಿ ಚನ್ನಮ್ಮ ಸ್ಮಾರಕ ಬಾಲಕಿಯರ ವಸತಿ ಸೈನಿಕ ಶಾಲೆಯಲ್ಲಿ ಯೋಗ ಮತ್ತು ಈಜು ಶಿಕ್ಷಣದ ಶಿಕ್ಷಕಿಯಾಗಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಯೋಗಾಸನದ ರೂಢಿ ಬೆಳೆಸಿಕೊಂಡಿದ್ದ ಇವರು, ಊರಿನ ಕೆರೆಯ ನೀರಿನ ಮೇಲೆ ತಂದೆ ಮಾಡುತ್ತಿದ್ದ ವಿವಿಧ ಆಸನಗಳ ಭಂಗಿಗಳನ್ನು ನೋಡಿ ಈ ಕಲೆ ರೂಢಿಸಿಕೊಂಡೆ ಎನ್ನುತ್ತಾರೆ ಅವರು.

ಕಲಿಕೆಯ ಹಿಂದಿದೆ ಶೋಕ: ‘ರಸ್ತೆ ಅಪಘಾತದಲ್ಲಿ ಸಹೋದರನನ್ನು ಕಳೆದುಕೊಂಡಾಗ ತಂದೆ ಅರ್ಜನ್ ಅವರು ಶೋಕಸಾಗರದಲ್ಲಿ ಮುಳುಗಿದ್ದರು. ಮನೆ ಬಿಟ್ಟು ಹೊರಗೆ ಹೋಗುತ್ತಿರಲಿಲ್ಲ. ಹೀಗೇ ಕೊರಗುತ್ತ ಕುಳಿತಿದ್ದಾಗ ಬದಲಾವಣೆ ಇರಲೆಂದು ಬಯಸಿದ ಸ್ನೇಹಿತರ ಬಳಗ ಊರ ಕೆರೆಗೆ ಜೊತೆಯಲ್ಲಿ ಕರೆದುಕೊಂಡು ಹೋಗಿ ಈಜುವುದನ್ನು ರೂಢಿ ಮಾಡಿಸಿದ್ದರು. ತಂದೆಗೆ ಸಂಪೂರ್ಣ ಈಜು ಬರುತ್ತಿರಲಿಲ್ಲ. ಒಂದು ದಿನ ತಂದೆ ಒಬ್ಬರೇ ಕೆರೆಗೆ ಧುಮುಕಿದರು. ಸರಿಯಾಗಿ ಈಜು ಬಾರದೇ ಒಮ್ಮೆ ಮುಳುಗಿದರು. ಹೇಗೋ ಸುಧಾರಿಸಿಕೊಂಡು ನೀರಿನಲ್ಲೇ ತೇಲುತ್ತ ನಿಂತರು. ಈ ಘಟನೆ ನಮಗೆ ಜಲಯೋಗ ಕಲಿಯಲು ಪ್ರೇರಣೆ ನೀಡಿತು’ ಎಂದು ಅವರು ಸ್ಮರಿಸಿದರು.

ಹೊರರಾಜ್ಯದಲ್ಲೂ ಪ್ರದರ್ಶನ: ‘ನೀರಿನಲ್ಲಿ ಪ್ರಾಣಾಯಾಮ ಮಾಡಿದರೆ ಕೆಲವರು ಮುಳುಗುತ್ತಾರೆ. ಆದರೆ ನೀರಿನಲ್ಲಿದ್ದುಕೊಂಡೆ ಪ್ರಾಣಾಯಾಮ ಮಾಡುವುದನ್ನೂ ರೂಢಿಸಿಕೊಂಡಿದ್ದೇನೆ. ಪದ್ಮಾಸನ, ಮತ್ಸ್ಯಾಸನ, ಹನುಮಾಸನ, ವೀರಭದ್ರಾಸನ, ನಾಗಿನಿ ಆಸನ, ವೃಕ್ಷಾಸನ, ಭದ್ರ ಕೋನಾಸನ, ಪಾದಗುಷ್ಟ ಸ್ಪರ್ಶಾಸನ ಸೇರಿದಂತೆ 90 ವಿವಿಧ ರೀತಿಯ ಆಸನಗಳನ್ನು ನೀರಿನ ಮೇಲೆ ರೂಢಿಸಿಕೊಂಡಿದ್ದೇನೆ’ ಎಂದು ವಿವರಿಸಿದರು.

‘ಕಿತ್ತೂರು ಸೈನಿಕ ಶಾಲೆಯಲ್ಲಿ ಯೋಗ ಹಾಗೂ ಈಜು ಶಿಕ್ಷಕಿಯಾಗಿದ್ದೇನೆ. ಮಕ್ಕಳಿಗೆ ಹೇಳಿಕೊಡುತ್ತಿದ್ದೇನೆ. ಇತ್ತೀಚೆಗೆ ಗ್ವಾಲಿಯರ್‌ನಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ’ ಎಂದರು. 

ಮಾಹಿತಿಗೆ 78924-37680 ಸಂಪರ್ಕಿಸಬಹುದು.

*
'ನೆಲದ ಮೇಲೆ ಮಾಡುವ ಯೋಗಕ್ಕಿಂತ ಇಮ್ಮಡಿ ಉತ್ಸಾಹವನ್ನು ಜಲಯೋಗ ನೀಡುತ್ತದೆ, ದೇಹವೂ ನಿರೋಗಿಯಾಗಿರುತ್ತದೆ'
-ಶ್ರೀದೇವಿ ಮಿರಜಕರ, ಜಲಯೋಗ ಪಟು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !