ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.7 ರಿಂದ ಐದು ದಿನ ‘ಬೆಳಗಾವಿ ಕೃಷಿ ಉತ್ಸವ’

Published 20 ಫೆಬ್ರುವರಿ 2024, 8:11 IST
Last Updated 20 ಫೆಬ್ರುವರಿ 2024, 8:11 IST
ಅಕ್ಷರ ಗಾತ್ರ

ಬೆಳಗಾವಿ: ‘ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಸೆಂಟ್ರಲ್‌, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಮಾ.7ರಿಂದ 11ರವರೆಗೆ ‘ಬೆಳಗಾವಿ ಕೃಷಿ ಉತ್ಸವ’ ಆಯೋಜಿಸಲಾಗಿದೆ’ ಎಂದು ಕ್ಲಬ್‌ ಅಧ್ಯಕ್ಷ ಮಂಜುನಾಥ ಅಲವಾನಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ವರ್ಷಗಳಿಂದ ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ನಮ್ಮ ಕ್ಲಬ್‌ ಈಗ ಕೃಷಿಕರಿಗೆ ನೆರವಾಗುವ ದೃಷ್ಟಿಯಿಂದ ಬೆಳಗಾವಿ ಕೃಷಿ ಉತ್ಸವ ಆಯೋಜಿಸಿದೆ. ಇಲ್ಲಿ 120 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಹೊಸ ಆವಿಷ್ಕಾರಗಳು, ಆಧುನಿಕ ತಂತ್ರಜ್ಞಾನಗಳು ಮತ್ತು ಯಂತ್ರೋಪಕರಣಗಳನ್ನು ಪರಿಚಯಿಸಲಾಗುವುದು. ಜತೆಗೆ ತಜ್ಞರಿಂದ ಸಲಹೆ, ಮಾರ್ಗದರ್ಶನ ನೀಡಲಾಗುವುದು’ ಎಂದರು.

‘ಕೃಷಿ ಉತ್ಸವದ ಕುರಿತು ಜನಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳು, ರೈತ ಸಂಘಟನೆಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲಾಗಿದೆ. ಬೆಳಗಾವಿಯಲ್ಲಿ ಇದೇ ಮೊದಲ ಸಲ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ರಾಸಾಯನಿಕ ಕೃಷಿ ಉತ್ಪನ್ನಗಳನ್ನೇ ಸಾವಯವವೆಂದು ಬಿಂಬಿಸಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಉತ್ಸವದಲ್ಲೂ ಬೆಳಕು ಚೆಲ್ಲಲಾಗುವುದು. ತಜ್ಞರ ಮೂಲಕ ಜನರಲ್ಲಿರುವ ಗೊಂದಲ ಬಗೆಹರಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೃಷಿ ಇಲಾಖೆ ಜಂಟಿನಿರ್ದೇಶಕ ಶಿವನಗೌಡ ಪಾಟೀಲ, ‘ಕೊರೊನಾ ನಂತರದ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರದತ್ತ ಹೆಚ್ಚಿನವರು ಮುಖಮಾಡಿದ್ದಾರೆ. ಕೃಷಿಯಲ್ಲೂ ಉತ್ತಮ ಬದುಕಿದೆ. ಈ ಉತ್ಸವದಲ್ಲಿ ಕೃಷಿ ಸಂಬಂಧಿಸಿ ರೈತರಿಗೆ ಸಮಗ್ರವಾಗಿ ಮಾಹಿತಿ ನೀಡಲಾಗುವುದು. ಇದು ರೈತರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT