ಅಥಣಿ: ತಾಲ್ಲೂಕಿನ ಅವರಖೋಡ ಗ್ರಾಮದ ‘ಗ್ರಾಮ ಒನ್’ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಹಾಕಲು ಹಣ ಪಡೆಯುತ್ತಿದ್ದ ಕಾರಣ ಕೇಂದ್ರವನ್ನು ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದರು.
ಗ್ರಾಮ ಒನ್ ಸಿಬ್ಬಂದಿ ಯಾವುದೇ ಹಣ ಪಡೆಯದೆ ಅರ್ಜಿ ಹಾಕಬೇಕು ಎಂದು ಸರ್ಕಾರ ನಿಯಮ ಮಾಡಿದೆ. ಆದರೆ, ಅವರಖೋಡ ಕೇಂದ್ರದ ಕಂಪ್ಯೂಟರ್ ಆಪರೇಟರ್ ಬೀರಪ್ಪ ಲೋಕೂರ ಅವರ ಮೇಲೆ ಪ್ರಕರಣ ಕೂಡ ದಾಖಲಿಸಲಾಗಿದೆ. ಗ್ರಾಮದ ಸುನಿತಾ ಎಂಬ ಮಹಿಳೆ ನೀಡಿದ ದೂರಿನ ಮೇಲೆ ಈ ಪ್ರಕರಣ ಹೊರಬಿದ್ದಿದೆ.
ಈ ಆರೋಪಿಯು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತಿಯೊಬ್ಬರಿಂದ ₹ 100 ಪಡೆಯುತ್ತಿದ್ದ. ಈ ರೀತಿ ಸರ್ಕಾರಿ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಾಕೀತು ಮಾಡಿದ್ದಾರೆ.