ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಇವಿಎಂಗಳ ಹಂಚಿಕೆ, ಮತಗಟ್ಟೆಗಳ ಪರಿಶೀಲನೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ
Last Updated 8 ಏಪ್ರಿಲ್ 2021, 13:12 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ವಿವಿ ಪ್ಯಾಟ್‌ಗಳನ್ನು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ದ್ವಿತೀಯ ಹಂತದ ರ‍್ಯಾಂಡಮೈಜೇಷನ್ (ಹಂಚಿಕೆ ಪ್ರಕ್ರಿಯೆ) ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಕ್ರಿಯೆ ವೇಳೆ, ಸಾಮಾನ್ಯ ವೀಕ್ಷಕ ಡಾ.ಚಂದ್ರಭೂಷಣ್ ತ್ರಿಪಾಠಿ ಕೂಡ ಹಾಜರಿದ್ದರು. ಚುನಾವಣಾ ಆಯೋಗದ ಮಾರ್ಗಸೂಚಿ ಅನುಸಾರ, ಸಂಪೂರ್ಣ ಕಂಪ್ಯೂಟರೀಕೃತ ಪ್ರಕ್ರಿಯೆ ಬಳಿಕ ಒಟ್ಟಾರೆ 2,566 ಬ್ಯಾಲೆಟ್ ಯುನಿಟ್, 2,566 ಕಂಟ್ರೋಲ್‌ ಯುನಿಟ್ ಹಾಗೂ 2,566 ವಿವಿ ಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಯಿತು.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಮಾಹಿತಿ ನೀಡಿದರು.

ಮೊದಲ ಹಂತದ ಪ್ರಕ್ರಿಯೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಈಗ 2ನೇ ಹಂತ ನಡೆದಿದೆ. ಮತಗಟ್ಟೆವಾರು ಮತಯಂತ್ರಗಳ ಹಂಚಿಕೆಯಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್ ಇದ್ದರು.

ಸೌಲಭ್ಯ ಕಲ್ಪಿಸಲು ಸೂಚನೆ:

ಉಪ ಚುನಾವಣೆ ಹಿನ್ನೆಲೆಯಲ್ಲಿ ವಿವಿಧೆಡೆ ಸ್ಥಾಪಿಸಲಾಗಿರುವ ವಲ್ನರೇಬಲ್ (ದುರ್ಬಲ) ಹಾಗೂ ಕ್ರಿಟಿಕಲ್ (ಸೂಕ್ಷ್ಮ) ಮತಗಟ್ಟೆಗಳನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಮತ್ತು ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ಗುರುವಾರ ಪರಿಶೀಲಿಸಿದರು.

ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಕುಡಿಯುವ ನೀರು, ವಿದ್ಯುತ್ ‌ಸೌಲಭ್ಯ, ಶೌಚಾಲಯ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಬೇಕು. ಮತದಾನ ದಿನಕ್ಕಿಂತ ಮುಂಚೆಯೇ ಎಲ್ಲ ಸೌಕರ್ಯಗಳು ಇರುವುದನ್ನು ಖಚಿತಪಡಿಸಿಕೊಂಡು ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುತ್ಯಾನಟ್ಟಿ, ಕಂಗ್ರಾಳಿ ಬಿ.ಕೆ., ಸದಾಶಿವ ನಗರ, ವಿಶ್ವೇಶ್ವರ ನಗರ, ಹಳೆ ಗಾಂಧಿನಗರ, ಆಜಾದ್ ನಗರ, ಹೊಸ ಗಾಂಧಿ ನಗರ, ಮಹಾಂತೇಶ ನಗರ, ಶಿಂದೊಳ್ಳಿ, ಬಸರಿಕಟ್ಟಿ, ಮುತಗಾ, ಬಾಳೆಕುಂದ್ರಿ ಕೆ.ಎಚ್. ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿದರು.

ನ್ಯಾಯಸಮ್ಮತ ಚುನಾವಣೆಗೆ ಕ್ರಮ

ಚುನಾವಣೆಯನ್ನು ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಇಲ್ಲಿ ಗುರುವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳ ಜತೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ಕ್ರಮ ವಹಿಸಲಾಗಿದೆ’ ಎಂದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳಿಂದಲೂ ಸಲಹೆ ಪಡೆಯಲಾಯಿತು. ಮತದಾನ, ಮತ ಎಣಿಕೆ, ಪೊಲೀಸ್ ನಿಯೋಜನೆ ಮತ್ತಿತರ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.

ಸಾಮಾನ್ಯ ವೀಕ್ಷಕ ಡಾ.ಚಂದ್ರಭೂಷಣ್ ತ್ರಿಪಾಠಿ, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT