ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ವರುಣನ ಮುನಿಸು: ಸೊರಗಿದ ಜಲಾಶಯಗಳು

ಬರಿದಾದ ಮಲಪ್ರಭಾ, ಘಟಪ್ರಭಾ ನದಿಗಳು, ನವಿಲುತೀರ್ಥ, ಹಿಡಕಲ್‌ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿತ
Published 9 ಜೂನ್ 2023, 23:52 IST
Last Updated 9 ಜೂನ್ 2023, 23:52 IST
ಅಕ್ಷರ ಗಾತ್ರ

ಇಮಾಮ್‌ಹುಸೇನ್ ಗೂಡುನವರ

ಬೆಳಗಾವಿ: ಈ ಬಾರಿ ಮುಂಗಾರು ಮಳೆ ವಿಳಂಬವಾಗಿದ್ದರಿಂದ ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ಒಡಲು ಬರಿದಾಗಿದ್ದು, ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಹಾಗೂ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಇಳಿಕೆಯಾಗಿದೆ. ‌

ಬೆಳಗಾವಿ ಮಾತ್ರವಲ್ಲದೆ;ಅವಳಿ ನಗರ ಹುಬ್ಬಳ್ಳಿ–ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಯ ಜನರ ದಾಹ ನೀಗಿಸುವ ನವಿಲುತೀರ್ಥದಲ್ಲಿ ನಾಲ್ಕೂವರೆ ಟಿಎಂಸಿ ಅಡಿ(ಲೈವ್‌ ಸ್ಟೋರೇಜ್‌) ಹಾಗೂ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವ ಹಿಡಕಲ್‌ನಲ್ಲಿ ಎರಡೇ ಟಿಎಂಸಿ ಅಡಿ ಸಂಗ್ರಹವಿದೆ. ಎರಡೂ ಕಡೆ ನೀರಿನ ಮಟ್ಟ ‍ಕುಸಿದಿದ್ದರಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

‘ಕುಡಿಯುವ ಉದ್ದೇಶಕ್ಕೆ ಈ ನೀರು ಜೂನ್‌ ಅಂತ್ಯದವರೆಗೆ ಸಾಕಾಗಲಿದೆ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಜಲಾಶಯಗಳನ್ನೇ ನೆಚ್ಚಿಕೊಂಡಿರುವ ನಗರ, ಪಟ್ಟಣ–ಗ್ರಾಮಗಳಲ್ಲಿ ಜನರು ಈಗಾಗಲೇ ಕುಡಿಯುವ ನೀರಿನ ಬವಣೆಯಿಂದ ತತ್ತರಿಸುತ್ತಿದ್ದಾರೆ. ವರುಣ ಶೀಘ್ರ ಕೃಪೆ ತೋರದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.

ಕಳೆದ ಬಾರಿಗಿಂತ ಕಡಿಮೆ: 37.73 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ನವಿಲುತೀರ್ಥದಲ್ಲಿ 2022ರ ಜೂ.9ರಂದು 8.17 ಟಿಎಂಸಿ ಅಡಿ(ಲೈವ್‌ ಸ್ಟೋರೇಜ್‌) ನೀರು ಸಂಗ್ರಹವಿತ್ತು. ಈ ವರ್ಷ ಜೂನ್‌ 9ರಂದು 4.58 ಟಿಎಂಸಿ ಅಡಿ ನೀರಿದೆ. 51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಡಕಲ್‌ ಜಲಾಶಯದಲ್ಲಿ 2022ರ ಜೂನ್‌ 9ರಂದು 6.46 ಟಿಎಂಸಿ ಅಡಿ(ಲೈವ್‌ ಸ್ಟೋರೇಜ್‌) ನೀರು ಸಂಗ್ರಹವಾಗಿತ್ತು. ಈ ಬಾರಿ 2.22 ಟಿಎಂಸಿ ಅಡಿ ಲಭ್ಯವಿದೆ.

ಕಾಲುವೆಗೆ ಹರಿಸುತ್ತಿಲ್ಲ: ಹಿಡಕಲ್‌ನಿಂದ ಘಟಪ್ರಭಾ ಬಲದಂಡೆ, ಎಡದಂಡೆ ಮತ್ತು ಚಿಕ್ಕೋಡಿ ಉಪಕಾಲುವೆಗೆ ಮೇ ತಿಂಗಳಲ್ಲಿ 2.17 ಟಿಎಂಸಿ ನೀರು ಬಿಡಲಾಗಿತ್ತು. ಬಾಗಲಕೋಟೆ ಜಿಲ್ಲೆಯ ನದಿಪಾತ್ರದ ಪಟ್ಟಣ, ಗ್ರಾಮಗಳ ಜನರಿಗಾಗಿ ಏಪ್ರಿಲ್‌, ಮೇ ತಿಂಗಳಲ್ಲಿ ಘಟಪ್ರಭೆಗೆ 5 ಟಿಎಂಸಿ ಅಡಿ ನೀರು ಹರಿಸಲಾಗಿತ್ತು. ನವಿಲುತೀರ್ಥದಿಂದ ಬಲದಂಡೆ, ಎಡದಂಡೆ ಹಾಗೂ ಮಲಪ್ರಭಾ ನದಿಗೆ ಮೇ ತಿಂಗಳಲ್ಲಿ 1 ಟಿಎಂಸಿ ಅಡಿ ನೀರು ಬಿಡಲಾಗಿತ್ತು.

ವರುಣ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಕಾಲುವೆಗಳಿಗೆ ನೀರು ಹರಿಸಬೇಕೆನ್ನುವ ಬೇಡಿಕೆ ಈಗಲೂ ರೈತರಿಂದ ಕೇಳಿಬರುತ್ತಿದೆ. ಆದರೆ, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಹೊರತಾದ ಉದ್ದೇಶಕ್ಕೆ ಬಳಸಲಾಗುತ್ತಿಲ್ಲ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನವಿಲುತೀರ್ಥ ಬಳಿ ಹರಿದಿರುವ ಮಲಪ್ರಭಾ ನದಿ ಒಡಲು ಬರಿದಾಗಿದೆ/ಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನವಿಲುತೀರ್ಥ ಬಳಿ ಹರಿದಿರುವ ಮಲಪ್ರಭಾ ನದಿ ಒಡಲು ಬರಿದಾಗಿದೆ/ಪ್ರಜಾವಾಣಿ ಚಿತ್ರ
ಈಗ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಕಾಯ್ದಿರಿಸಿದ್ದೇವೆ. ಸದ್ಯಕ್ಕೆ ಎಲ್ಲಿಯೂ ಗಂಭೀರವಾದ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ
–ವಿವೇಕ ಮುದಿಗೌಡರ ಕಾರ್ಯನಿರ್ವಾಹಕ ಎಂಜಿನಿಯರ್‌ ನವಿಲುತೀರ್ಥ ಜಲಾಶಯ
ನಮ್ಮೂರಿನಲ್ಲೇ ಮಲಪ್ರಭೆ ಹರಿದಿದ್ದರೂ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಹನಿ ನೀರಿಗೆ ಹಾಹಾಕಾರ ಪಡುವಂತಾಗಿದೆ.
–ನಾಗರಾಜ ಲಂಗೋಟಿ ಸವದತ್ತಿ

ಕೊಳವೆಬಾವಿ ಬಾಡಿಗೆ ಪಡೆದಿದ್ದೇವೆ

‘ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಾಧಿತವಾದ ಹಳ್ಳಿಗಳ ಪಟ್ಟಿ ಸಿದ್ಧಪಡಿಸಿದ್ದೇವೆ. 18 ಹಳ್ಳಿಗಳಲ್ಲಿ 22 ಟ್ಯಾಂಕರ್‌ಗಳ ಮೂಲಕ ನಿತ್ಯ 130 ಟ್ರಿಪ್‌ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಅಲ್ಲದೆ 31 ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು 41 ಹಳ್ಳಿಗಳಿಗೆ ನೀರು ಒದಗಿಸುತ್ತಿದ್ದೇವೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT