ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಿಂದ ದೂರ ಓಬಳಾಪುರ

ಸ್ವಚ್ಛತೆಯೇ ಇಲ್ಲಿ ಮರೀಚಿಕೆ: ಗ್ರಾಮಸ್ಥರ ಪರದಾಟ
Published 4 ಅಕ್ಟೋಬರ್ 2023, 7:07 IST
Last Updated 4 ಅಕ್ಟೋಬರ್ 2023, 7:07 IST
ಅಕ್ಷರ ಗಾತ್ರ

ರಾಮದುರ್ಗ: ಹೊಸ ಗ್ರಾಮ ಪಂಚಾಯ್ತಿಯಾಗಿ 8 ವರ್ಷ ಕಳೆದರೂ, ತಾಲ್ಲೂಕಿನ ಓಬಳಾಪುರದಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ಮನೆಯ ಮೋರಿಯ ನೀರು ಗ್ರಾಮ ಪಂಚಾಯ್ತಿ ಮುಂದಿನ ರಸ್ತೆಯಲ್ಲಿ ನಿಲ್ಲುತ್ತಿದ್ದರೂ, ಸಿಬ್ಬಂದಿ ಅದನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗಿಲ್ಲ.

ಓಬಳಾಪುರ ಗ್ರಾಮದಲ್ಲಿ ಬಹುತೇಕ ಕಡೆ ಚರಂಡಿ ಇಲ್ಲ. ಮೋರಿಯ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಜನರಿಗೆ ನಡೆದಾಡಲು ತೊಂದರೆಯಾಗಿದೆ. ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

ಮಂದಗತಿಯಲ್ಲಿ ಸಾಗಿದೆ: ಊರಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಆದರೆ, ಜಲಜೀವನ ಮಿಷನ್‌ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ನಳ ಜೋಡಿಸುವುದಕ್ಕಾಗಿ ಒಳ ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗೆದಿದ್ದರಿಂದ ಇಡೀ ಗ್ರಾಮ ಕಳೆಗುಂದಿದೆ. ಕೆಲವೆಡೆ ಕಾಂಕ್ರೀಟ್‌ ರಸ್ತೆ ನಿರ್ಮಿಸಿಲ್ಲ. ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿ ಮಾರ್ಪಡುತ್ತಿವೆ. ಇಡೀ ಊರಿನಲ್ಲಿ ನಲ್ಲಿ ನೀರಿನಿಂದಲೇ ರಸ್ತೆಗಳು ಮಡುವುಗಟ್ಟುತ್ತಿವೆ. ಮನೆಯ ಮುಂದಿನ ರಸ್ತೆಗಳಲ್ಲಿ ಹೊಂಡಗಳದ್ದೇ ಅಬ್ಬರ ಕಂಡುಬರುತ್ತಿದೆ. ಉತ್ತಮ ರಸ್ತೆ ಇಲ್ಲದ್ದರಿಂದ ಪರಿಶಿಷ್ಟರ ಕಾಲೊನಿಗೆ ಹೋಗಲು ಜನರು ಸರ್ಕಸ್‌ ಮಾಡುವಂತಾಗಿದೆ.

ಬಯಲೇ ಶೌಚಾಲಯ: ಗ್ರಾಮದಲ್ಲಿ ಕೆಲವರು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡಿದ್ದಾರೆ. ಉಳಿದವರು ಶೌಚಕ್ಕಾಗಿ ಬಯಲಿನತ್ತ ಮುಖಮಾಡುತ್ತಿದ್ದಾರೆ. ಅಂತಹವರಿಗಾಗಿ ಸಾರ್ವಜನಿಕ ಶೌಚಗೃಹ ನಿರ್ಮಿಸುವಲ್ಲಿ ಮತ್ತು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳುವಲ್ಲಿ ಜನರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವಲ್ಲಿ ಗ್ರಾಮ ಪಂಚಾಯ್ತಿ ವಿಫಲವಾಗಿದೆ. ಗ್ರಾಮದ ಸುತ್ತಲೂ ಗಲೀಜು ವಾತಾವರಣ ನಿರ್ಮಾಣವಾಗಿದೆ.

‘ಓಬಳಾಪುರ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡರೆ ಕೆಲವರು ತೊಂದರೆ ಕೊಡುತ್ತಾರೆ. ಹಾಗಾಗಿ ಈಗಾಗಲೇ ಮಾಡಿರುವ ಕಾಮಗಾರಿಗಳ ಉಸ್ತುವಾರಿ ಮಾಡುವುದಷ್ಟೇ ನಮ್ಮ ಕೆಲಸವಾಗಿದೆ. ದುರುದ್ದೇಶದಿಂದ ಕಳಪೆ ಕಾಮಗಾರಿ, ಭ್ರಷ್ಟಾಚಾರ ಎಂದು ಆರೋಪ ಹೊರಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಗೋಳು ತೋಡಿಕೊಂಡರು.

10 ವರ್ಷಗಳಿಂದ ಇಲ್ಲಿ ರಸ್ತೆ ಚರಂಡಿ ನಿರ್ಮಿಸಿಲ್ಲ. ಒಂದುವೇಳೆ ಅಭಿವೃದ್ಧಿ ಕೆಲಸ ಕೈಗೊಂಡರೆ ತಕರಾರು ಹೆಚ್ಚಾಗಿವೆ. ಆದರೆ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ
ಸದಾಶಿವ ಹಲಗಿ ಪಿಡಿಒ ಓಬಳಾಪುರ
ದಶಕದಿಂದ ನಮ್ಮೂರಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜಕೀಯ ಬೆರೆತು ಇಲ್ಲಿ ಆಡಳಿತ ವ್ಯವಸ್ಥೆಯೇ ನಿಷ್ಕ್ರಿಯಗೊಂಡಿದೆ. ಇನ್ನಾದರೂ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು
ಬಸವರಾಜ ಅಂಗಡಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT