ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನಕುಪ್ಪಿ ಕೆರೆ ನೀರಿಲ್ಲದೆ ಭಣಭಣ...

ಕಾಲುವೆಯಿಂದ ಕೆರೆಗೆ ಹರಿಯದ ಹನಿ ನೀರು, ಗ್ರಾಮಸ್ಥರ ಪರದಾಟ
Published 3 ಜೂನ್ 2024, 5:07 IST
Last Updated 3 ಜೂನ್ 2024, 5:07 IST
ಅಕ್ಷರ ಗಾತ್ರ

ಮೂಡಲಗಿ: ಪ್ರತಿವರ್ಷ ಬರದಿಂದ ತತ್ತರಿಸಿದ ತಾಲ್ಲೂಕಿನ ಹೊನಕುಪ್ಪಿ ಗ್ರಾಮದ ಕೆರೆ ನೀರಿಲ್ಲದೆ ಭಣಗುಡುತ್ತಿದೆ. ಇದರಿಂದಾಗಿ ಸುತ್ತಲಿನ ಪರಿಸರದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಜಾನುವಾರುಗಳ ದಾಹ ನೀಗಿಸಲು ರೈತರು ಪರದಾಡುವಂತಾಗಿದೆ.

ಈ ಕೆರೆ ಸಮೀಪದಲ್ಲೇ ಹೊನಕುಪ್ಪಿ–ಬಸಳಿಗುಂದಿ ಕಾಲುವೆ ಇದೆ. ಹಲವು ವರ್ಷಗಳಿಂದ ಆ ಕಾಲುವೆಯಿಂದ ಕೆರೆಗೆ ನೀರು ತುಂಬಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಘಟಪ್ರಭಾ ನದಿಯಿಂದ ಕಾಲುವೆ ಅಂತ್ಯದವರೆಗೆ ನೀರು ಹರಿಯುತ್ತಿಲ್ಲ. ಹಾಗಾಗಿ ಕೆರೆಗೂ ಸಮರ್ಪಕವಾಗಿ ನೀರು ತುಂಬಿಸಲಾಗುತ್ತಿಲ್ಲ.

ಹಾಗಾಗಿ ಮಳೆ ಬಂದರಷ್ಟೇ ಕೆರೆಗೆ ನೀರು ಹರಿದುಬರುತ್ತದೆ. ಇಲ್ಲದಿದ್ದರೆ ನೀರಿಲ್ಲದೆ ಕೆರೆಯೊಡಲು ಬಿಕೋ ಎನ್ನುತ್ತಿದೆ. ಆದರೆ, ಹೊನಕುಪ್ಪಿ ಕೆರೆಯ ಕೂಗು ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳ ಕಿವಿಗೆ ಬೀಳುತ್ತಿಲ್ಲ.

ಹೊನಕುಪ್ಪಿ ಹೊರವಲಯದ ಕೆರೆ ಸುಮಾರು ನಾಲ್ಕು ಎಕರೆಯಲ್ಲಿದೆ. ಇದು ಅತಿಕ್ರಮಣ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿಬರುತ್ತಿದೆ.

‘ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆಯಿಂದ ಮಾರ್ಚ್‌ ತಿಂಗಳಲ್ಲಿ ಕೆರೆ ಆವರಣದಲ್ಲಿ ಬೆಳೆದಿದ್ದ ಕಸ ಸ್ವಚ್ಛಗೊಳಿಸಿದ್ದೇವೆ. ಕೆರೆಗೆ ನೀರು ತುಂಬಿಸಲು ಪ್ರಯತ್ನಿಸುತ್ತೇವೆ’ ಎಂದು ಸುಣಧೋಳಿ ಪಿಡಿಒ ಗಂಗಾಧರ ಮಲ್ಹಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆ ತುಂಬಿದರೆ ಅಕ್ಕಪಕ್ಕದ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಜಾನುವಾರುಗಳಿಗೆ ಕುಡಿಯಲು ನೀರಿನ ವ್ಯವಸ್ಥೆಯಾಗುತ್ತದೆ. ಕೆರೆ ಉಳಿಯಬೇಕಾದರೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆ ಜಾರಿಯಾಗಬೇಕು

- ಕೃಷ್ಣಾ ದೊಡ್ಡಗೌಡರ ರೈತ

ಪೈಪ್‌ಲೈನ್‌ ಅಗತ್ಯವಿದೆ ‘ಈ ಹಿಂದೆ ಬಿಲಕುಂದಿ ಏತ ನೀರಾವರಿ ಯೋಜನೆಯಿಂದ ಕೆರೆಗೆ ನೀರು ಹರಿಸಲು ಯೋಜಿಸಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಯೋಜನೆ ಕೈಬಿಡಲಾಯಿತು. ಈಗ ಸುಣಧೋಳಿ ಬಳಿ ನಿರ್ಮಿಸುತ್ತಿರುವ ಜಾಕ್‌ವೆಲ್‌ನಿಂದ ಹೊನಕುಪ್ಪಿ ಕೆರೆಗೆ ನೀರು ತುಂಬಿಸಲು ಪೈಪ್‌ಲೈನ್‌ ಮಾಡಬೇಕಾದ ಅಗತ್ಯವಿದೆ’ ಎಂದು ರೈತ ಭೀಮಪ್ಪ ಅಲಕನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT