ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಮಹಿಳೆ ಬಟ್ಟೆ ಹರಿದು ಥಳಿತ; 20 ಮಂದಿ ವಿರುದ್ಧ ಎಫ್‌ಐಆರ್‌

Published 2 ಜನವರಿ 2024, 15:28 IST
Last Updated 2 ಜನವರಿ 2024, 15:28 IST
ಅಕ್ಷರ ಗಾತ್ರ

ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಮಹಿಳೆಯೊಬ್ಬರನ್ನು ಎಳೆದಾಡಿ ಬಟ್ಟೆ ಹರಿದು, ಥಳಿಸಿದ ಪ್ರಕರಣ ತಿಂಗಳ ಬಳಿಕ ಹೊರಬಿದ್ದಿದೆ. ಈ ಸಂಬಂಧ ಆರು ಮಹಿಳೆಯರೂ ಸೇರಿ 20 ಮಂದಿಯ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ತಿಗಡಿ ಗ್ರಾಮದಲ್ಲಿ ವೃದ್ಧರೊಬ್ಬರು ತಮ್ಮ ಆರು ಎಕರೆ ಜಮೀನನ್ನು ಬಣವಿ ಕಟ್ಟಲು ಇತರರಿಗೆ ನೀಡಿದ್ದರು. ಆ ಜಾಗವನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ ಎಂದು ವೃದ್ಧರ ಸೊಸೆ ನ್ಯಾಯಾಲಯ ಮೊರೆ ಹೋಗಿದ್ದಾರೆ. ಈ ಪ್ರಕರಣ ಬೈಲಹೊಂಗಲ ನ್ಯಾಯಾಲಯ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿದೆ.

ಆರೋಪಿಗಳಲ್ಲಿ ಕೆಲವರು ತಮ್ಮ ಜಮೀನಿಗೆ ನೀರು ಬಳಸಲು ಪೈಪ್‌ಲೈನ್‌ ಅಳವಡಿಸಿದ್ದರು. ಈ ಪೈಪ್‌ಲೈನ್‌ ಸಂತ್ರಸ್ತ ಮಹಿಳೆಯ ಜಮೀನಿಗೆ ಹೊಂದಿಕೊಂಡಿದೆ. ಇದರಿಂದ ಸಂತ್ರಸ್ತೆಯ ಜಮೀನಿಗೆ ಹೆಚ್ಚು ನೀರು ನುಗ್ಗಿ ಬೆಳೆ ಹಾಳಾಗುತ್ತಿತ್ತು. ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ ಮಹಿಳೆ, ಪೈಪ್‌ಲೈನ್‌ ತೆರವುಗೊಳಿಸಿದ್ದರು.

‘2023ರ ನವೆಂಬರ್‌ 21ರಂದು ಇದೇ ವಿಚಾರಕ್ಕೆ ಸಂತ್ರಸ್ತೆ ಹಾಗೂ ಆರೋಪಿಗಳ ಮಧ್ಯೆ ಜಗಳ ನಡೆಯಿತು. 20 ಜನ ಸೇರಿಕೊಂಡು ಸಂತ್ರಸ್ತ ಮಹಿಳೆ ಮೇಲೆ ಹಲ್ಲೆ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಕಲ್ಲಪ್ಪ ಡೊಂಕಣ್ಣವರ ಅವರ ಕುಮ್ಮಕ್ಕಿನಿಂದ ಕಲ್ಲಪ್ಪ ಡೊಂಕಣ್ಣವರ ಮತ್ತು ಅಡಿವೆಪ್ಪ ದಳವಾಯಿ ಅವರೇ ಹಲ್ಲೆ ಮಾಡಿದರು. ಸಂತ್ರಸ್ತೆ ಉಟ್ಟಿದ್ದ ಬಟ್ಟೆ ಎಳೆದಾಡಿ ಹರಿದರು. ಪೈಪ್‌ಲೈನ್‌ ಅನ್ನು ಮರಳಿ ಜೋಡಿಸದಿದ್ದರೆ ಜೀವಂತ ಬಿಡುವುದಿಲ್ಲವೆಂದು ಹೆದರಿಸಿದರು’ ಎಂದು ದೂರಿನಲ್ಲಿ ಬರೆಯಲಾಗಿದೆ.

‘ಸಂತ್ರಸ್ತ ಮಹಿಳೆ ದೂರು ನೀಡಲು ಬೈಲಹೊಂಗಲಕ್ಕೆ ಹೊರಡುವಾಗ ತಿಗಡಿ ಬಸ್‌ ನಿಲ್ದಾಣಕ್ಕೆ ಬಂದ ಇನ್ನೊಬ್ಬ ಆರೋಪಿ ಮಲ್ಲವ್ವ ಕರಡಿಗುದ್ದಿ ಎನ್ನುವವರು ಹಲ್ಲೆ ಮಾಡಿದರು. ಅವಾಚ್ಯ ಪದ ಬಳಸಿ ನಿಂದಿಸಿದರು. ಮಾನಹಾನಿ ಆಗುವಂತೆ ಬಟ್ಟೆ ಎಳೆದಾಡಿದರು. ಅಲ್ಲಿಂದ ತಮ್ಮ ವಾಹನದಲ್ಲಿ ಒತ್ತಾಯಪೂರ್ವಕವಾಗಿ ಹತ್ತಿಸಿಕೊಂಡು ಗ್ರಾಮ ಪಂಚಾಯಿತಿಗೆ ಕರೆತಂದರು. ಅಲ್ಲಿ ಅರುಣ ಖಂಡುಗೋಳ ಎಂಬ ಆರೋಪಿ ತನಗೆ ಹೆದರಿಕೆ ಹಾಕಿ, ಖಾಲಿ ಹಾಳೆ ಹಾಗೂ ಕೆಲವು ಬಾಂಡ್‌ಗಳ ಮೇಲೆ ಸಂತ್ರಸ್ತೆಯ ಸಹಿ ಪಡೆದರು’ ಎಂದೂ ಎಫ್‌ಐಆರ್‌ನಲ್ಲಿದೆ.

‘ಮಹಿಳೆ ವ್ಯಾನಿಟಿ ಬ್ಯಾಗಿನಲ್ಲಿದ್ದ ₹1.50 ಲಕ್ಷ ಹಣ, ಮೊಬೈಲ್‌ ಅನ್ನೂ ಆರೋಪಿಗಳು ಕಿತ್ತುಕೊಂಡಿದ್ದಾರೆ’ ಎಂದೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ತಿಂಗಳ ಬಳಿಕ ಎಫ್‌ಐಆರ್‌: ಘಟನೆ 2023ರ ನವೆಂಬರ್‌ 21ರಂದು ನಡೆದಿದ್ದರೂ ಡಿಸೆಂಬರ್‌ 30ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ, ಇದೂವರೆಗೆ ಯಾರನ್ನೂ ಬಂಧಿಸಿಲ್ಲ. ಬೈಲಹೊಂಗಲ ಪೊಲೀಸರು ಪ್ರಕರಣವನ್ನು ಜಿಲ್ಲಾ ಮಹಿಳಾ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

‘ತಿಗಡಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕಾಗಿ ಜಗಳ ನಡೆದಿದೆ. ಮಹಿಳೆ ತಡವಾಗಿ ದೂರು ನೀಡಿದ್ದಾರೆ. 20 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ಮುಂದುವರಿದಿದೆ’ ಎಂದು ಜಿಲ್ಲಾ ಮಹಿಳಾ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT