ಶನಿವಾರ, ಮಾರ್ಚ್ 25, 2023
22 °C

ಸಾಹಿತಿ ಹಾಗೂ ಜಾನಪದ ತಜ್ಞ ಜ್ಯೋತಿ ಹೊಸೂರ ಇನ್ನಿಲ್ಲ: ಜೆಎನ್‌ಎಂಸಿಗೆ ಮೃತದೇಹ ದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ರಾಯಬಾಗದ ಸಾಹಿತಿ ಹಾಗೂ ಜಾನಪದ ತಜ್ಞರೂ ಆಗಿದ್ದ ಪ್ರೊ.ಜ್ಯೋತಿ (ಜೋತೆಪ್ಪ) ಹೊಸೂರ (84) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸೋಮವಾರ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತದೇಹವನ್ನು ಕೆ.ಎಲ್.ಇ. ಸಂಸ್ಥೆಯ ಜೆಎನ್‌ಎಂಸಿಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಯಬಾಗದ ಖಾಸಗಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹಾಗೂ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಗಾದೆ, ಒಡಪು, ಗ್ರಾಮದೇವತೆಗಳ ಕುರಿತು ಸಂಶೋಧನೆ ನಡೆಸಿದ್ದರು. ಅವರು ನಡೆಸಿದ ಸಂಶೋಧನೆಗಳು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದವು. ಶಂಬಾ ಜೋಶಿ ಅವರ ಪ್ರಭಾವಕ್ಕೆ ಒಳಗಾಗಿ, ಅವರ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದರು. ರಾಯಬಾಗದಲ್ಲಿ ‘ಕಾಲಗತಿ’ ಪ್ರಕಾಶನ ಎಂಬ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಶಂಬಾ ಜೋಶಿ ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದ್ದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಕನಕದಾಸ, ವಚನ ಸಾಹಿತ್ಯ (ಕ್ರಾಂತಿಕಾರಿ ವಚನಗಳು) ಸೇರಿದಂತೆ ಹಲವು ಅಧ್ಯಯನಪೂರ್ಣ ಕೃತಿಗಳನ್ನು ಹೊರತಂದಿದ್ದರು. ಹಾಲುಮತದ ಸಾಂಸ್ಕೃತಿಕ ನಾಯಕರಾದ ಬೀರಪ್ಪ, ಇಟ್ಟಪ್ಪ, ಮಾಳಿಂಗರಾಯರ ಕುರಿತ ಚರಿತ್ರೆಯ ಕುರಿತು ಅಧ್ಯಯನ ಮಾಡಿ ಗ್ರಂಥಗಳನ್ನು ಹೊರತಂದಿದ್ದಾರೆ. ಜಾನಪದ ಸಂಶೋಧನೆ ಹಾಗೂ ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.

ಅವರು ಸಂಪಾದಿಸಿದ ಪ್ರಸಿದ್ಧ ಜಾನಪದ ಒಡಪುಗಳನ್ನು ಒಳಗೊಂಡ ‘ಹೆಸರ ಹೇಳ್ತೇನಿ ಒಡಪಕಟ್ಟಿ’, ‘ಬೆರಸಿಯಿಟ್ಟೇನ ಬೆಲ್ಲ ನೆನಗಡಲಿ’ ಕೃತಿಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿವೆ. 30 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ವಿದ್ವತ್‌ಪೂರ್ಣ ಲೇಖನಗಳು ಪ್ರಕಟಗೊಂಡಿವೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮ ಸಂಶೋಧನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 2017ರಲ್ಲಿ ಹಾರೂಗೇರಿಯಲ್ಲಿ ನಡೆದಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸರಜೂ ಕಾಟ್ಕರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಡಾ.ರಾಮಕೃಷ್ಣ ಮರಾಠೆ, ಡಾ.ಎಚ್.ಐ. ತಿಮ್ಮಾಪುರ, ಡಾ.ಎಚ್.ಬಿ. ಕೋಲಕಾರ, ಡಾ.ಕೆ.ಎನ್. ದೊಡ್ಡಮನಿ, ಬಿ.ಎ. ಸನದಿ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು