ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಶನಿವಾರ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ 260 ಪೊಲೀಸರು ದಾಳಿ ನಡೆಸಿದರು. ಜೈಲಿನಲ್ಲಿ ನಿಷೇಧವಿರುವ ಹಲವು ವಸ್ತುಗಳನ್ನು ವಶಕ್ಕೆ ಪಡೆದರು.
ಜೈಲಿನ ಒಳಗೆ ತಂಬಾಕು ಪಾಕೇಟ್, ಸಿಗರೇಟ್, ಮೂರು ಚಾಕುಗಳು, ಸ್ಮಾಲ್ ಹೀಟರ್ ವೈರ್ ಬಂಡಲ್, ಎಲೆಕ್ಟ್ರಿಕಲ್ ಒಲೆ ಸೇರಿ ಮತ್ತಿತರ ವಸ್ತುಗಳನ್ನು ದಾಳಿ ವೇಳೆ ಪೊಲೀಸರು ಜಪ್ತಿ ಪಡಿಸಿಕೊಂಡರು. ನಸುಕಿನ 5ಕ್ಕೆ ತಂಡದೊಂದಿಗೆ ಬಂದ ಕಮಿಷನರ್ ಸಂಪೂರ್ಣ ಪರಿಶೀಲನೆ ಮಾಡಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ ಮುಂದಾಳತ್ವದಲ್ಲಿ ಗಂಟೆಗಟ್ಟಲೇ ಪರಿಶೀಲನೆ ನಡೆಸಿದ ಪೊಲೀರು, ಜೈಲಿನ ಇಂಚಿಂಚೂ ತಡಕಾಡಿದರು. ಮೆಟಲ್ ಡಿಟೆಕ್ಟರ್, ಶ್ವಾನದಳಗಳನ್ನೂ ತೆಗೆದಗೆ ತೆಗೆದುಕೊಂಡು ತಪಾಸಣೆ ಮಾಡಿದರು.
‘ಜೈಲಿನಲ್ಲಿ ನಿಷೇಧಿತ, ಅಕ್ರಮ ವಸ್ತುಗಳು ಇವೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಜೈಲಿನ ಮೇಲೆ ದಾಳಿ ಮಾಡಿದ್ದೇವೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ, ಸಿಗರೇಟ್, ತಂಬಾಕು ಪಾಕೇಟ್ ಇನ್ನಿತರ ವಸ್ತುಗಳು ಜೈಲಿನೊಳಗೆ ಹೇಗೆ ಬಂದವು..? ಯಾರು ತೆಗೆದುಕೊಂಡು ಬಂದರು.. ಎಂಬ ವಿಚಾರಗಳ ಬಗ್ಗೆ ತನಿಖೆ ನಡೆಸಿ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ’ ಎಂದು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು.
ಕಳೆದ ಎರಡು ವರ್ಷಗಳಿಂದಲೂ ಹಿಂಡಲಗಾ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಪದೇಪದೇ ಬೆಳಕಿಗೆ ಬಂದಿವೆ. ಜೈಲಿನೊಳಗೆ ಇದ್ದುಕೊಂಡೇ ಕೈದಿಯೊಬ್ಬ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಸ್ಫೋಟಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಕೈದಿಗಳು ಬಳಸುತ್ತಿದ್ದ ತಂಬಾಕು ತಪ್ಪನ್ನಗಳ ಬಗ್ಗೆಯೂ ಪದೇಪದೇ ಪ್ರಕರಣಗಳು ಬೆಳಕಿಗೆ ಬಂದಿದ್ದವು.