ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಕಾರ್ಖಾನೆಗೆ ಬೆಂಕಿ: 14 ತಾಸು ಕಾರ್ಯಾಚರಣೆ; ಕಾರ್ಮಿಕನ ಶವ ಪತ್ತೆ

Published : 7 ಆಗಸ್ಟ್ 2024, 6:58 IST
Last Updated : 7 ಆಗಸ್ಟ್ 2024, 6:58 IST
ಫಾಲೋ ಮಾಡಿ
Comments

ಬೆಳಗಾವಿ: ಸಮೀಪದ ನಾವಗೆ ಗ್ರಾಮದಲ್ಲಿ ಸ್ನೇಹಂ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಿಕ್ಕಿಕೊಂಡಿದ್ದ ಕಾರ್ಮಿಕನ ದೇಹ ಸುಟ್ಟು ಭಸ್ಮವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬೆಳಗಾವಿಯ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಗುಂಡ್ಯಾಗೋಳ (20) ಮೃತ ಪಟ್ಟ ಕಾರ್ಮಿಕ. ಲಿಫ್ಟನಲ್ಲಿ ವಿದ್ಯುತ್ ಅವಘಡದಿಂದ‌ ಈ ಅನಾಹುತ ಸಂಭವಿಸಿದೆ.

ಮೆಡಿಕಲ್ ಟೇಪಗಳನ್ನು‌ ತಯಾರಿಸುವ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಬೆಂಕಿ‌ ಹೊತ್ತಿಕೊಂಡಿತು. ಆಗ ಒಳಗಡೆ ಇದ್ದ ಹಲವು ಅಗ್ನಿ‌ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು. ಬೆಂಕಿಯಲ್ಲಿ ಬೆಂದ ಮೂವರನ್ನು ಹೊರಕ್ಕೆ ಎಳೆತಂದು ರಕ್ಷಿಸಲಾಯಿತು.

ಆದರೆ, ಯಲ್ಲಪ್ಪ ಲಿಫ್ಟಿನಲ್ಲಿ ಸಿಕ್ಕಿಕೊಂಡಿದ್ದರು. ಲಿಫ್ಟನಲ್ಲೇ ಮೊದಲು ಬೆಂಕಿ‌ ಹೊತ್ತಿಕೊಂಡಿದ್ದರಿಂದ ಯಲ್ಲಪ್ಲ ಪಾರಾಗಲು ಆಸ್ಪದ ಸಿಗಲಿಲ್ಲ ಎಂದು ಜತೆಗಿದ್ದವರು ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಕೋಣಿ ನೇತೃತ್ವದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮೃತ ಕಾರ್ಮಿಕನ ಮೃತದೇಹ ಪರಿಶೀಲನೆ ನಡೆಸಿದರು.

14 ತಾಸು ಕಾರ್ಯಾಚರಣೆ:

ಬೆಂಕಿಯ ಕೆನ್ನಾಲಿಗೆ ಎಷ್ಟು ಭೀಕರವಾಗಿದೆ ಎಂದರೆ ಆರು ಅಗ್ನಿಶಾಮಕ ವಾಹನಗಳು, ಹಲವು ಸಿಬ್ಬಂದಿ ರಾತ್ರಿ ಇಡೀ ಕಾರ್ಯಾಚರಣೆ ಮಾಡಿದರೂ ಬೆಂಕಿ ಹತೋಟಿಗೆ ಬರಲಿಲ್ಲ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಟ್ಟಡದ ಗೋಡೆ, ಕಿಟಕಿಗಳನ್ನು ಜೆಸಿಬಿ ಯಂತ್ರದಿಂದ ಒಡೆದು ಹಾಕಿ ಒಳಗೆ ನೀರು ಚಿಮ್ಮಿಸಿ ಬೆಂಕಿ‌ ನಂದಿಸಲು ಯತ್ನಿಸಲಾಯಿತು.

ಕಾರ್ಖಾನೆ ಸುತ್ತಮುತ್ತಲಿನ 10 ಕಿ.ಮೀ. ಪ್ರದೇಶದ ದಟ್ಟ ಹೊಗೆ ಮತ್ತು ಪ್ಲಾಸ್ಟಿಕ್ ಸುಟ್ಟ ಘಾಟು ವಾಸನೆಯಿಂದ ಜನ ಹೈರಾಣಾದರು. ಪೊಲೀಸರು, ಅಗ್ನಿಶಾಮ ಅಧಿಕಾರಿಗಳು ಮಾಸ್ಕ್ ಧರಿಸಿಯೇ ಕಾರ್ಯಾಚರಣೆ ಮುಂದುವರಿಸಿದರು.

ಮೂರು ಅಂತಸ್ತಿನ ಈ ಕಟ್ಟಡಕ್ಕೆ ಸಣ್ಣ ಸಣ್ಣ ಕಿಟಕಿಗಳಿದ್ದು, ಸೂಕ್ತಪ್ರವೇಶ ದ್ವಾರಗಳು ಇಲ್ಲ. ನಾಲ್ಕು ದಿಕ್ಕಿನಲ್ಲಿ ಎತ್ತರದ ಗೋಡೆಗಳು ಇರೋದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT