ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಪ್ರವಾಹ: ರಸ್ತೆ ಹಾನಿ, ಸಂಚಾರ ಸಂಕಷ್ಟ

ಚಂದ್ರಶೇಖರ ಪಿ. ದೊಡ್ಡಮನಿ
Published 12 ಆಗಸ್ಟ್ 2024, 5:21 IST
Last Updated 12 ಆಗಸ್ಟ್ 2024, 5:21 IST
ಅಕ್ಷರ ಗಾತ್ರ

ಘಟಪ್ರಭಾ: ಘಟಪ್ರಭಾ ನದಿಯ ಉಪ ನದಿಗಳಾದ ಹಿರಣ್ಯಕೇಶಿ ಹಾಗೂ ಮಾರ್ಕಾಂಡೆಯ ನದಿಗಳ ಪ್ರವಾಹದಿಂದಾಗಿ ಕೆಲ ಗ್ರಾಮಗಳು ಜಲಾವೃತಗೊಂಡರೆ ಪ್ರಮುಖ ಸೇತುವೆಗಳು ಹಾಗೂ ರಸ್ತೆಗಳು ಹಾನಿಯಾಗಿದ್ದು, ಸಂಚಾರವೇ ದುಸ್ತರವಾಗಿದೆ.

ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಿಡಕಲ್ ಅಣೆಕಟ್ಟಿನಿಂದ ಅಪಾರ ಪ್ರಮಾಣದಲ್ಲಿ ಹರಿಬಿಡಲಾಗುತ್ತಿರುವ ನೀರಿನಿಂದಾಗಿ ಈ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಕಳೆದ 2019ರಲ್ಲಿ ಸಂಭವಿಸಿದ ಪ್ರವಾಹದ ನಂತರ ಮತ್ತದೆ ಸಮಸ್ಯೆ ಎದುರಾಗಿದೆ.

ಸಮೀಪದ ಘಟಪ್ರಭಾ ನದಿಪಾತ್ರದ ಟಕ್ಕೆ ಶಿಂಗಳಾಪೂರ, ಲೋಳಸೂರ ಹಾಗೂ ಶಿಂಧಿಕುರಬೇಟ ಗ್ರಾಮಗಳ ಕೆಲ ಭಾಗಗಳಲ್ಲಿ ನದಿ ನೀರು ನುಸುಳಿದೆ. ಗೋಕಾಕ ನಗರವನ್ನೆ ಅವಲಂಬಿಸಿದ ಘಟಪ್ರಭಾ, ಕೊಣ್ಣೂರು, ಧುಪದಾಳ, ಗೋಕಾಕಫಾಲ್ಸಿಗೆ ಸಂಪರ್ಕ ಹೊಂದಿರುವ ಎರಡು ಸೇತುವೆಗಳು ಜಲಾವೃತಗೊಂಡಿದ್ದು, ಫಾಲ್ಸ್ ಮೂಲಕ ಬೆಳಗಾವಿ ಎಡೆಗೆ ಸಾಗುವ ಮಾರ್ಗ ಮಧ್ಯವಿರುವ ಚಿಕ್ಕೊಳ್ಳಿ ಸೇತುವೆಯನ್ನು ಎರಡು ದಿನಗಳ ಹಿಂದೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ನೀರು ಸೇತುವೆಗೆ ಅಪ್ಪಳಿಸಿದ್ದರಿಂದ ಜಖಂಗೊಂಡಿದ್ದು, ಲಾರಿ, ಬಸ್ಸು, ಟೆಂಪೋ ಮತ್ತು ದೊಡ್ಡ ವಾಹನಗಳನ್ನು ನಿಷೇಧಗೊಳಿಸಲಾಗಿದ್ದು, ಕೇವಲ ಕಾರು, ದ್ವಿಚಕ್ರವಾಹನಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಈ ಸೇತುವೆಯ ಎರಡು ತುದಿಗೆ ಬಸ್, ಟಿಂಪೋ, ಆಟೋ ಹಾಗೂ ಇತರೆ ವಾಹನಗಳು ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಿವೆ. ಹೀಗಾಗಿ ಇಲ್ಲಿ ಬಸ್ ನಿಲ್ದಾಣವಾಗಿ ಪರಿಣಮಿಸಿದೆ.

ಈ ಸೇತುವೆ ಮೇಲೆ ಭಾರದ ವಾಹನಗಳು ಸಂಚರಿಸದಂತೆ ಪೊಲೀಸ್ ಸಿಬ್ಬಂದಿ ಪ್ರತಿ ಕ್ಷಣವೂ ಮುಕ್ಕಾಂ ಹೂಡಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಏತನ್ಮದ್ಯೆ ಶಿಂಗಳಾಪೂರ ರಸ್ತೆ ಹದಗೆಟ್ಟಿದೆ ಕೂಡಲೆ ದುರಸ್ತಿ ಮಾಡಬೇಕೆಂದು ಅಲ್ಲಿಯ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಅರ್ಪಿಸಿ ಒತ್ತಾಯಿಸಿದ್ದಾರೆ. ಈ ಮೊದಲೆ ಧುಪದಾಳ ರಸ್ತೆಯ ದುರಸ್ತಿಗಾಗಿ ಮನವಿ ಸಲ್ಲಿಸಲಾಗಿದೆ.

ಜುಲೈ ಕೊನೆ ವಾರದಲ್ಲಿ ಸುರಿದ ಮಳೆಯಿಂದಾಗಿ ಇನ್ನಿಲ್ಲದ ಅವಾಂತರ ಸೃಷ್ಠಿಯಾಗಿದ್ದ, ಗೋಕಾಕ-ಫಾಲ್ಸ್ ಮಧ್ಯೆ ಇರುವ ಗುಡ್ಡದಲ್ಲಿ ಭೂಕುಸಿತ ಉಂಟಾಗಬಹುದೇ? ಎಂದು ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಲೋಕೋಪಯೋಗಿ ತಂಡ ಮುಂಜಾಗೃತಾ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದೆ.

ಪರ್ಯಾಯ ವ್ಯವಸ್ಥೆ:  ಇಲ್ಲಿ ಮಳೆಯ ಅಬ್ಬರವಿಲ್ಲವಾದರೂ ನದಿಯ ನೀರು ಅಪಾರ ಪ್ರಮಾಣದಲ್ಲಿ ಕೋಡಿಯಾಗಿ ಹೊಲಗದ್ದೆಗಳಿಗೆ ಹರಿದು ಬೆಳೆ ನಾಶವಾಗಿದೆ.

ಶಾಲಾ ಕಾಲೇಜುಗಳಿಗೆ ನಿತ್ಯ ಸಂಚರಿಸುವ ಮಕ್ಕಳು ಬಸ್ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳನ್ನು ಅವಲಂಬಿಸಬೇಕಾಗಿದೆ. ಲೋಳಸೂರು ಸೇತುವೆಯೆ ಪ್ರಮುಖವಾದ್ದರಿಂದ ಎರಡು ವರ್ಷಗಳ ಹಿಂದೆಯೆ ಶಿಂಗಳಾಪೂರದಿಂದ ಗೋಕಾಕಕ್ಕೆ ನೂತನ ಸೇತುವೆ ನಿರ್ಮಿಸಲಾಗಿತ್ತಾದರೂ ಅದೂ ಕೂಡ ಜಲಾವೃತಗೊಂಡಿದೆ. ಇಲ್ಲಿ ಕೇವಲ ಕಾಲ್ನಡಿಗೆಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನೂ ಗೋಕಾಕಫಾಲ್ಸ್‌ನ ಚೌಕಿ ಬಳಿ ನೂತನ ಸೇತುವೆ ನಿರ್ಮಿಸಿದ್ದು, ಕಳೆದೆರಡು ತಿಂಗಳ ಹಿಂದೆಯೆ ಕಾರ್ಯಾರಂಭ ಮಾಡಿದ್ದು, ಇದರಿಂದ ಎಷ್ಟೊ ಜನರಿಗೆ ಅನುಕೂಲವಾಗಿದೆ.

ಜನಪ್ರತಿನಿಧಿಗಳ ಭೇಟಿ:  ಜನಪ್ರತಿನಿಧಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಘಟಪ್ರಭಾ ನದಿಯಿಂದ ಹರಿ ಬಿಡಲಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾದ ನಂತರ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.

ಒಬೆರಾಯನ ಈ ಸೇತುವೆಗಳಿಗೆ ಕಾಯಕಲ್ಪ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು. ಈ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಿದ್ದು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರ ಮನವಿಯಾಗಿದೆ.

ಗೋಕಾಕ ಹಾಗೂ ಫಾಲ್ಸ್ ಮಧ್ಯೆ ಇರುವ ಚಿಕ್ಕೊಳ್ಳಿ ಸೇತುವೆ ಬಳಿ ನಿರ್ಮಾಣವಾದ ತಾತ್ಕಾಲಿಕ ನಿಲ್ದಾಣ
ಗೋಕಾಕ ಹಾಗೂ ಫಾಲ್ಸ್ ಮಧ್ಯೆ ಇರುವ ಚಿಕ್ಕೊಳ್ಳಿ ಸೇತುವೆ ಬಳಿ ನಿರ್ಮಾಣವಾದ ತಾತ್ಕಾಲಿಕ ನಿಲ್ದಾಣ
ಗೋಕಾಕ ಹಾಗೂ ಫಾಲ್ಸ್ ಮಧ್ಯೆ ಇರುವ ಚಿಕ್ಕೊಳ್ಳಿ ಸೇತುವೆ
ಗೋಕಾಕ ಹಾಗೂ ಫಾಲ್ಸ್ ಮಧ್ಯೆ ಇರುವ ಚಿಕ್ಕೊಳ್ಳಿ ಸೇತುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT