ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸ್ಮಾರ್ಟ್‌ಸಿಟಿ ಮೇಯರ್‌; ಇನ್ನೂ ಗೋಪ್ಯ

ಮೇಯರ್‌, ಉಪಮೇಯರ್‌ ಆಯ್ಕೆಗೆ ಕ್ಷಣಗಣನೆ; ಬಿಜೆಪಿಯಲ್ಲಿ ಇನ್ನಿಲ್ಲದ ತಳಮಳ
Last Updated 4 ಫೆಬ್ರುವರಿ 2023, 6:03 IST
ಅಕ್ಷರ ಗಾತ್ರ

ಬೆಳಗಾವಿ: ಒಂದೂವರೆ ವರ್ಷದ ನಂತರ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಿಗೆ ಅಧಿಕಾರಿ ಸಿಗುವ ಯೋಗ ಕೂಡಿ ಬಂದಿದೆ. ಫೆ. 6ರಂದು ಮೇಯರ್‌– ಉಪ ಮೇಯರ್‌ ಚುನಾವಣೆ ನಡೆಯಲಿದ್ದು, ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸ್ಮಾರ್ಟ್‌ಟಿಸಿಯ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.

ಚುನಾವಣಾ ಪ್ರಕ್ರಿಯೆಗೆ ಕೋರ್ಟ್‌ ಅನುಮತಿ ನೀಡಿ ಎರಡು ವಾರಗಳಾಗಿದ್ದು, ಅಂದಿನಿಂದಲೂ ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತುಗಳು ನಡೆದಿವೆ. ಯಾರಿಗೆ ಕುರ್ಚಿ ಎಂಬುದನ್ನು ಈಗಲೇ ಘೋಷಣೆ ಮಾಡಿದರೆ ಅಸಮಾಧಾನ ಉಂಟಾದವರು ಚದುರಿ ಹೋಗುವ ಸಾಧ್ಯತೆಯೂ ಇದೆ. ಈ ಕಾರಣಕ್ಕಾಗಿಯೇ ಬಿಜೆಪಿ ಅತ್ಯಂತ ಗೋಪ್ಯತೆ ಕಾಪಾಡಿಕೊಂಡಿದೆ.

ಮೇಯರ್‌ ಸ್ಥಾನ ‘ಸಾಮಾನ್ಯ ಮಹಿಳೆ’ ಮತ್ತು ಉಪಮೇಯರ್‌ ‘ಹಿಂದುಳಿದ ವರ್ಗ ಬಿ ಮಹಿಳೆ’ಗೆ ಮೀಸಲಾಗಿದೆ.‌ 58 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 35 ಸ್ಥಾನಗಳೊಂದಿಗೆ ಬಿಜೆಪಿ ಬಹುಮತ ಗಳಿಸಿದೆ. ಕಾಂಗ್ರೆಸ್ 10, ಎಐಎಂಐಎಂ 1 ಸ್ಥಾನ ಗೆದ್ದರೆ, 12 ವಾರ್ಡ್‌ಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿವೆ. ಪಕ್ಷೇತರವಾಗಿ ಗೆದ್ದ 12 ಮಂದಿಯಲ್ಲಿ ಇಬ್ಬರು ಬಿಜೆಪಿ ಪರವಾಗಿ ಮತ್ತೆ ಇಬ್ಬರು ಎಂಇಎಸ್‌ ಬೆಂಬಲಿತರಾಗಿ ನಿಂತಿದ್ದಾರೆ.

ಬಿಜೆಪಿಯೇ ದೊಡ್ಡ ಪಕ್ಷವಾದ್ದರಿಂದ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಚ್ಚಳವಾಗಿದೆ. ಆದರೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಎಲ್ಲರೂ ಪರಸ್ಪರ ಪ್ರತಿಸ್ಪರ್ಧಿಗಳಾಗಿ ನಿಂತಿದ್ದಾರೆ.

ಬಿಜೆಪಿಯಲ್ಲಿರುವ 12 ವನಿತೆಯರ ಪೈಕಿ ವಾಣಿ ಜೋಶಿ ಹಾಗೂ ಸಾರಿಕಾ ಪಾಟೀಲ ಹೆಚ್ಚು ಉತ್ಸಾಹ ತೋರಿದ್ದಾರೆ. ನೇತ್ರಾವತಿ ಭಾಗವತ್‌, ಪ್ರೀತಿ ಕಾಮಕರ, ರೇಷ್ಮಾ ಪಾಟೀಲ ಕೂಡ ತೆರೆಮರೆಯಲ್ಲಿ ಯತ್ನ ನಡೆಸಿದ್ದಾರೆ.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ಮೇಲೆ ಒತ್ತಡ ಹೇರಿ ಮೇಯರ್ ಪಟ್ಟ ಗಿಟ್ಟಿಸಿಕೊಳ್ಳಲು ಎಲ್ಲರೂ ಮುಗಿಬಿದ್ದಿದ್ದಾರೆ. ಎರಡೂ ಹುದ್ದೆಗಳನ್ನು ಬಿಜೆಪಿಯವರೇ ಪಡೆಯಲಿದ್ದಾರೆ, ಆದರೆ ಯಾರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂಬುದನ್ನು ಮಾತ್ರ ನಾಯಕರು ಬಹಿರಂಗ ಮಾಡಲು ಸಿದ್ಧರಿಲ್ಲ.

ಅವಿರೋಧವಾಗಿ ಆಯ್ಕೆ ಮಾಡಲು ನಾಯಕರು ಕಸರತ್ತು ನಡೆಸಿದ್ದಾರೆ. ಆದರೆ, ಒಮ್ಮತ ಮೂಡದ ಕಾರಣ ಚುನಾವಣೆಗೆ ಹೋಗುವುದು ಅನಿವಾರ್ಯವಾಗಿದೆ ಎನ್ನುತ್ತವೆ ಮೂಲಗಳು.

ಮತದಾನ: ಫೆ. 6ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಮಧ್ಯಾಹ್ನ 3ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 3 ಗಂಟೆಯವರೆಗೆ ನಾಮಪತ್ರ ಹಿಂತೆಗೆದು
ಕೊಳ್ಳಲು ಅವಕಾಶವಿದೆ. ಅಗತ್ಯಬಿದ್ದಲ್ಲಿ ಮತದಾನ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

*

ಭಾಷೆ ಮೀರಿದ ಆಡಳಿತ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ರಾಜ್ಯದ ಇತರ ಪಾಲಿಕೆಗಳಿಗಿಂತ ವಿಶಿಷ್ಟ. ಪ್ರತಿ ಬಾರಿ ಇಲ್ಲಿ ಕನ್ನಡ ಹಾಗೂ ಮರಾಠಿ ಭಾಷೆ ಆಧರಿಸಿಯೇ ಚುನಾವಣೆ ನಡೆಯುತ್ತಿತ್ತು. ಆದರೆ, ಈ ಅವಧಿಯ ಚುನಾವಣೆ ಪಕ್ಷ ಆಧಾರಿತವಾಗಿ ನಡೆದಿದೆ.

ಇದಕ್ಕೂ ಮುಂಚೆ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆ ಅತ್ಯಂತ ರೋಚಕವಾಗಿ ಇರುತ್ತಿತ್ತು. ಇಲ್ಲಿ ಭಾಷಾ ಆಧರಿತವಾಗಿಯೇ ಎಲ್ಲರೂ ಆಯ್ಕೆಯಾಗುತ್ತಿದ್ದರು. ಹೀಗಾಗಿ, ಎಲ್ಲರೂ ಪಕ್ಷೇತರ ಸದಸ್ಯರೇ ಆಗಿದ್ದರು. ಯಾವ ಪಕ್ಷದವು ಬೇಕಾದರೂ ಯಾರನ್ನಾದರೂ ಸೆಳೆಯಲು ಅವಕಾಶವಿತ್ತು. ಸಹಜವಾಗಿಯೇ ಆಗ ‘ಕುದುರೆ ವ್ಯಾಪಾರ’ಕ್ಕೆ ಹೆಚ್ಚು ಅವಕಾಶಗಳಿದ್ದವು.

ಈ ಬಾರಿ ಪಕ್ಷಗಳ ಚಿಹ್ನೆ ಆಧರಿಸಿ ಚುನಾವಣೆ ಮಾಡಿದ್ದರಿಂದ ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ ಇರಲಿದೆ.

*

ಒಟ್ಟು ಮತದಾರರ ಸಂಖ್ಯೆ 65

58 ವಾರ್ಡ್‌ ಸದಸ್ಯರೂ ಸೇರಿದಂತೆ ಸಂಸದರಾದ ಮಂಗಲಾ ಅಂಗಡಿ, ಅಣ್ಣಾಸಾಹೇಬ್‌ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್‌, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಕೂಡ ಮತದಾರರಾಗಿದ್ದಾರೆ.

ಯಮಕನಮರಡಿ ಕ್ಷೇತ್ರದ ಕೆಲ ಭಾಗ ಕೂಡ ಮಹಾನಗರ ಪಾಲಿಕೆಗೆ ಒಳಪಟ್ಟ ಕಾರಣ ಶಾಸಕ ಸತೀಶ ಅವರೂ ಮತದಾರರಾಗಿದ್ದಾರೆ. ಅಚ್ಚರಿಯೆಂದರೆ, ಯಮಕನಮರಡಿ ಕ್ಷೇತ್ರವು ಚಿಕ್ಕೋಡಿ ಸಂಸದರ ಕ್ಷೇತ್ರವ ವ್ಯಾಪ್ತಿಗೆ ಒಳಪಟ್ಟ ಕಾರಣ ಅಣ್ಣಾಸಾಹೇಬ್‌ ಕೂಡ ಪಾಲಿಕೆಯಲ್ಲಿ ಮತದಾನ ಹಕ್ಕು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT