ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ಯರಿಗೆ’ ಮನೆ ಮಂಜೂರು: ಪಿಡಿಒ ಅಮಾನತು

Last Updated 14 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜೀವ್‌ಗಾಂಧಿ ವಸತಿ ನಿಗಮದಿಂದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಿಗಬೇಕಿದ್ದ ಆಶ್ರಯ ಮನೆಗಳನ್ನು, ಇತರ ಸಮುದಾಯಗಳಿಗೆ ಕಾನೂನುಬಾಹಿರಬಾಗಿ ಮಂಜೂರು ಮಾಡಿದ್ದಕ್ಕೆ ಗೋಕಾಕ ತಾಲ್ಲೂಕು ಬೆಣಚಿನಮರಡಿ (ಕೊ) ಗ್ರಾಮ ಪಂಚಾಯಿತಿ ಪಿಡಿಒ ಅಮಾನತುಗೊಳಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ರುದ್ರಪ್ಪ ನಿಂಗಪ್ಪ ವಡ್ರಗಾವಿ ಅಮಾನತುಗೊಂಡವರು.

‘ಆ ಪಂಚಾಯಿತಿಯಲ್ಲಿ 2016–17ನೇ ಸಾಲಿನಲ್ಲಿ 77 ಆಶ್ರಯ ಮನೆಗಳಲ್ಲಿ 76 ಮನೆಗಳನ್ನು ಬೇರೆ ಸಮುದಾಯದವರಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ, ಇದನ್ನು ಗಂಭೀರವಾಗಿ ಪಿಡಿಒ ಅಮಾನತು ಮಾಡಲಾಗಿದೆ. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಹಾಗೂ ಹಣವನ್ನು ಅವರಿಂದ ವಸೂಲಿ ಮಾಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು. ಆ ಪಂಚಾಯಿತಿಯ ಅಧ್ಯಕ್ಷರಿಗೂ ನೋಟಿಸ್ ಜಾರಿಗೊಳಿಸಲಾಗುವುದು’ ಎಂದು ಸಿಇಒ ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆಗಳ ಮಂಜೂರಾತಿಯಲ್ಲಿ ಅಕ್ರಮವಾಗಿರುವ ಕುರಿತು ದೂರುಗಳಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಒತ್ತಾಯಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತಂದಿದ್ದರು. ಆರ್‌ಟಿಐ ಕಾರ್ಯಕರ್ತ ಸುರೇಂದ್ರ ಉಗಾರೆ ಕೂಡ ದಾಖಲೆಗಳನ್ನು ಸಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದರು.

ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮತ್ತು ಜಿಲ್ಲಾ ಪಂಚಾಯಿತಿಯಿಂದ ಪ್ರತ್ಯೇಕವಾಗಿ ತನಿಖೆ ನಡೆಸಲಾಗಿತ್ತು. ಪರಿಶೀಲಿಸಿದ ಬಳಿಕ, ಅಕ್ರಮ ನಡೆದಿರುವುದು ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT