ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿಯಲ್ಲಿ ಬಿಜೆಪಿ ಸದಸ್ಯನ ಅಪಹರಣ: ಕಾರ್ಯಕರ್ತರಿಂದ ಪ್ರತಿಭಟನೆ

Published : 30 ಆಗಸ್ಟ್ 2024, 10:11 IST
Last Updated : 30 ಆಗಸ್ಟ್ 2024, 10:11 IST
ಫಾಲೋ ಮಾಡಿ
Comments

ಬೆಳಗಾವಿ: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಗುರುವಾರ ರಾತ್ರಿ ಅಪಹರಣ ಮಾಡಿರುವುದನ್ನು ಖಂಡಿಸಿ ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ(ಎಸ್‌‍ಪಿ) ಆವರಣದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ನಾಗರಾಜ ಅಸುಂಡಿ ಅವರನ್ನು ಪೊಲೀಸರು ತಕ್ಷಣವೇ ಪತ್ತೆ ಮಾಡಿ, ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಒಪ್ಪಿಸಬೇಕು’ ಎಂದು ಆಗ್ರಹಿಸಿ, ಎಸ್‌‍ಪಿ ಡಾ.ಭೀಮಾಶಂಕರ ಗುಳೇದ ಅವರಿಗೆ ಮನವಿ ಸಲ್ಲಿಸಿದರು.

ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ‘ಈ ಹಿಂದೆ ಚನ್ನಮ್ಮನ ಕಿತ್ತೂರು ಕ್ಷೇತ್ರದ ಶಾಸಕರಾಗಿದ್ದ ಡಿ.ಬಿ.ಇನಾಮದಾರ, ಮಹಾಂತೇಶ ದೊಡಗೌಡರ ಉತ್ತಮ ರಾಜಕಾರಣ ಮಾಡಿದ್ದರು. ಆದರೆ, ಹಾಲಿ ಶಾಸಕ ಬಾಬಾಸಾಹೇಬ ಪಾಟೀಲ ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಬಿಜೆಪಿ ಸದಸ್ಯನ ಅಪಹರಣ ಮಾಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೋಲೆ’ ಎಂದು ದೂರಿದರು.

‘ಸೆ.3ರಂದು ನಿಗದಿಯಾಗಿರುವ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಬೇಕು’ ಎಂದು ಆಗ್ರಹಿಸಿದರು.

‘ಎಲ್ಲ ಆಯಾಮಗಳಲ್ಲಿ ತನಿಖೆ ನಡೆದಿದೆ. ಬಿಜೆಪಿ ಸದಸ್ಯನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುವುದು’ ಎಂದು ಗುಳೇದ ಭರವಸೆ ನೀಡಿದರು.

ಲಕ್ಷ್ಮಿ ಇನಾಮದಾರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT