ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಗರಣದ ವಿರುದ್ಧ ಬಿಜೆಪಿ ಆಕ್ರೋಶ
Published 29 ಜೂನ್ 2024, 6:43 IST
Last Updated 29 ಜೂನ್ 2024, 6:43 IST
ಅಕ್ಷರ ಗಾತ್ರ

ಬೆಳಗಾವಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಅವ್ಯವಹಾರದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.

 ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ್ ಬೆನಕೆ ನೇತೃತ್ವದಲ್ಲಿ ನಗರದ ಸರ್ದಾರ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ ಅವರ ಭಿತ್ತಿಚಿತ್ರಗಳಿಗೆ ಮಸಿ ಬಳಿದು ಆಕ್ರೋಶ ಹೊರಹಾಕಿದರು.

‘ಪರಿಶಿಷ್ಟರಿಗೆ ಅನ್ಯಾಯ ಮಾಡಿದ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಎಂದು ಕಾರ್ಯಕರ್ತರು ಘೋಷಣೆ ಮೊಳಗಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ ಕಿತ್ತು ಮುತ್ತಿಗೆ ಹಾಕಲು ಬಂದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನವನ್ನು ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಬಳಸಿದೆ. ಡೆತ್‌ನೋಟ್‌ನಲ್ಲಿ ಸಚಿವರ ಹೆಸರಿದ್ದರೂ ಎಫ್‌ಐಆರ್ ಆಗಿಲ್ಲ. ಕೇವಲ ರಾಜೀನಾಮೆ ಪಡೆದು ಬಿಟ್ಟಿದ್ದಾರೆ. ಇದೇ ವಿಚಾರಕ್ಕೆ ಈಗಾಗಲೇ ಒಬ್ಬರು ಸಂಪುಟದಿಂದ ಹೊರಬಂದಿದ್ದಾರೆ. ಈ ಪ್ರಕರಣದಲ್ಲಿ ಹಲವರ ಕೈವಾಡವಿದೆ. ಎಲ್ಲ ಹೆಸರೂ ಹೊರಬೀಳಬೇಕು’ ಎಂದು ಅನಿಲ್ ಬೆನಕೆ ಆಗ್ರಹಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ‘ಪರಿಶಿಷ್ಟರ ಉದ್ಧಾರದ ಬಗ್ಗೆ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ದೊಡ್ಡ ಭಾಷಣ ಮಾಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ; ದ್ರೋಹ ಬಗೆದಿದ್ದಾರೆ’ ಎಂದರು.

‘ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಡೆತ್‌ನೋಟ್‌ನಲ್ಲಿ ನಾಗೇಂದ್ರ ಹೆಸರು ಬರೆದಿದ್ದರೂ ಸರ್ಕಾರ ಎಫ್ಐಆರ್ ದಾಖಲಿಸಿಲ್ಲ. ಕಲಂ 302, 307 ಅಡಿಯಲ್ಲಿ ನಾಗೇಂದ್ರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ’ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜೀರಲಿ ಒತ್ತಾಯಿಸಿದರು.

ಶಾಸಕ ವಿಠ್ಠಲ ಹಲಗೇಕರ್, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡ್ಡಗೌಡರ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮುರುಘೇಂದ್ರಗೌಡ ಪಾಟೀಲ, ರುದ್ರಣ್ಣ ಚಂದರಗಿ ಸೇರಿ ಮತ್ತಿತರರು ಇದ್ದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT