ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ಶಾಸಕರ ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ!

ಫಲಿತಾಂಶ ವಿಶ್ಲೇಷಣೆ
Last Updated 24 ಮೇ 2019, 9:44 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ ಅವರಿಗೆ ಅವರದ್ದೇ ಪಕ್ಷದ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲೂ ಭಾರೀ ಹಿನ್ನಡೆ ಉಂಟಾಗಿದೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಇವರ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿರುವುದು ಕಾಂಗ್ರೆಸ್‌ ಪಾಳೆಯದಲ್ಲಿ ಆತಂಕ ಮೂಡಿಸಿದೆ.

ಬೈಲಹೊಂಗಲದಲ್ಲಿ ಮಹಾಂತೇಶ ಕೌಜಲಗಿ, ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಶಾಸಕರಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿಗೆ ಎರಡರಿಂದ ಮೂರು ಪಟ್ಟು ಹೆಚ್ಚು ಮತಗಳ ಲೀಡ್‌ ದೊರೆತಿದೆ.

ರಮೇಶ ಗೈರು– ಹೊಡೆತ:

ಪಕ್ಷದ ಜೊತೆ ಮುನಿಸಿಕೊಂಡಿದ್ದ ಶಾಸಕ ರಮೇಶ ಜಾರಕಿಹೊಳಿ ಒಮ್ಮೆಯೂ ಸಾಧುನವರ ಪರ ಪ್ರಚಾರಕ್ಕೆ ಬರಲಿಲ್ಲ. ಇದಲ್ಲದೇ, ಕೊನೆಯ ಗಳಿಗೆಯಲ್ಲಿ ಗೋಪ್ಯವಾಗಿ ಬಿಜೆಪಿ ಪರ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಇದರ ಪರಿಣಾಮವಾಗಿ ಗೋಕಾಕದಲ್ಲಿ ಸಾಧುನವರ ಅವರಿಗೆ 59,585 ಮತಗಳ ಭಾರಿ ಹಿನ್ನಡೆ ಉಂಟಾಯಿತು.

ಸಹೋದರ ರಮೇಶ ಅವರ ಕೊರತೆಯನ್ನು ತುಂಬಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಾಕಷ್ಟು ಪ್ರಚಾರ ನಡೆಸಿದ್ದರು. ಬೆಳಗಾವಿ, ಗೋಕಾಕದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಆದರೆ ಪ್ರತಿಫಲ ಮಾತ್ರ ಶೂನ್ಯ. ಗೋಕಾಕ ಪ್ರಚಾರದ ಜವಾಬ್ದಾರಿಯನ್ನು ತಮ್ಮ ಸಹೋದರ ಲಖನ್‌ ಜಾರಕಿಹೊಳಿ ಅವರಿಗೆ ನೀಡಿದ್ದರೂ ಪ್ರಯೋಜನವಾಗಲಿಲ್ಲ. ಬಿಜೆಪಿ ಕಡೆ ಹೋಗುವ ಮತಗಳನ್ನು ತಡೆಯುವಲ್ಲಿ ವಿಫಲರಾದರು.

ಬೆವರು ಹರಿಸಿದ್ದರೂ ಪ್ರಯೋಜನವಾಗಲಿಲ್ಲ:

ಸಾಧುನವರ ಜೊತೆಗೂಡಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತನ್ನ ಕ್ಷೇತ್ರದ ತುಂಬ ಪ್ರಚಾರ ಕೈಗೊಂಡಿದ್ದರು. ಹಲವು ದಿನಗಳವರೆಗೆ ನಿರಂತರವಾಗಿ ಮತದಾರರನ್ನು ಭೇಟಿಯಾಗಿದ್ದರು. ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡಿದ್ದರು. ಪ್ರಚಾರಕ್ಕೆಂದು ಹೋದಾಗ ಸೇರುತ್ತಿದ್ದ ಜನಸಮೂಹವನ್ನು ನೋಡಿ, ಸಾಧುನವರ ಪುಳಕಿತರಾಗಿದ್ದರು.

‘ಪಕ್ಷದ ಅಭ್ಯರ್ಥಿ ಸಾಧುನವರ ಹೊಸಬರು ಇದ್ದಾರೆ. ನಿಮ್ಮಲ್ಲಿ ಬಹಳಷ್ಟು ಜನರಿಗೆ ಇವರ ಪರಿಚಯ ಇಲ್ಲದಿರಬಹುದು. ಆದರೆ, ನೀವು ನನ್ನನ್ನು ನೋಡಿ ಅವರಿಗೆ ಮತ ನೀಡಿ. ಕಳೆದ ವರ್ಷ 1,02,040 ಮತ ನೀಡಿ ನನ್ನನ್ನು ಶಾಸಕಿಯನ್ನಾಗಿಸಿದ್ದೀರಿ. ಇದಕ್ಕಿಂತಲೂ ಹೆಚ್ಚು ಮತಗಳನ್ನು ಸಾಧುನವರ ಅವರಿಗೆ ಕೊಡಿಸುತ್ತೇನೆ ಎಂದು ಪಕ್ಷದ ಮುಖಂಡರಲ್ಲಿ ವಾಗ್ದಾನ ಮಾಡಿದ್ದೇನೆ. ನನ್ನ ಮಾತು ಉಳಿಸಿಕೊಡಿ’ ಎಂದು ಲಕ್ಷ್ಮಿ ಪರಿಪರಿಯಾಗಿ ಬೇಡಿಕೊಂಡಿದ್ದರು. ಆದರೆ, ಇದ್ಯಾವುದೂ ಫಲಕೊಡಲಿಲ್ಲ.

ಸ್ವಂತ ನೆಲೆಯಲ್ಲೂ ಹಿನ್ನಡೆ:

ತಮ್ಮ ಸ್ವಂತ ನೆಲೆಯಾದ ಬೈಲಹೊಂಗದಲ್ಲಿಯೂ ಸಾಧುನವರ ಹಿನ್ನಡೆ ಅನುಭವಿಸಿದರು. ಇಲ್ಲಿ ಅವರ ಹಣಕಾಸು ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿದ್ದರೂ ಪ್ರಯೋಜನವಾಗಲಿಲ್ಲ. ಇದಲ್ಲದೇ, ಇಲ್ಲಿನ ಶಾಸಕ ಮಹಾಂತೇಶ ಕೌಜಲಗಿ ಅವರದ್ದೇ ಪಕ್ಷದವರಾಗಿದ್ದರೂ ಲಾಭವಾಗಲಿಲ್ಲ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಭಿಸಿದ್ದಕ್ಕಿಂತ ಕಡಿಮೆ ಮತಗಳು ಬಂದವು.

ಬಿಜೆಪಿ ಜಯಭೇರಿ:

ತಮ್ಮದೇ ಪಕ್ಷದ ಶಾಸಕರಿರುವ ಐದು ವಿಧಾನಸಭಾ ಕ್ಷೇತ್ರಗಳ ಜೊತೆಗೆ ಎಲ್ಲ ಎಂಟೂ ಕ್ಷೇತ್ರಗಳ ಮತದಾರರ ಒಲವನ್ನು ಬಿಜೆಪಿಯ ಸುರೇಶ ಅಂಗಡಿ ಗಳಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅತಿ ಹೆಚ್ಚು 1,17,947 ಮತ ಪಡೆದರೆ, ಬೆಳಗಾವಿ ದಕ್ಷಿಣದಲ್ಲಿ ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿಗಿಂತ ಅತಿ ಹೆಚ್ಚು 89,663 ಮತಗಳ ಅಂತರ ಪಡೆದರು. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗಿಂತ ಮುನ್ನಡೆ ಸಾಧಿಸಿ, ಜಯದ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT