ಶನಿವಾರ, ಡಿಸೆಂಬರ್ 5, 2020
21 °C
ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ತಂತ್ರ

ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಸಚಿವರಿಗೆ ಪತ್ರ, ಕಪ್ಪು ಬಲೂನ್ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ನ.1ರಂದು ನಡೆಸುವ ಕರಾಳ ದಿನಾಚರಣೆಗೆ ಈ ಬಾರಿ ಅನುಮತಿ ಕೊಡುವುದಿಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸ್ಪಷ್ಟಪಡಿಸಿರುವುದರಿಂದ ಕಂಗಾಲಾಗಿರುವ ಸಮಿತಿಯ ಮುಖಂಡರು, ಬೇರೆ ರೀತಿಯಲ್ಲಿ ತಮ್ಮ ಪ್ರತಿರೋಧ ದಾಖಲಿಸಲು ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ‍ಪಡಿಸಲು ಯೋಜಿಸಿದೆ.

‘ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ರಾಜ್ಯೋತ್ಸವದಂದು ಸೈಕಲ್ ರ‍್ಯಾಲಿ ನಡೆಸಲು ನಮಗೆ ಅನುಮತಿ ಕೊಡುತ್ತಿಲ್ಲ. ಹೀಗಾಗಿ, ನಮ್ಮ ಪರವಾಗಿ ನೀವು ಮಹಾರಾಷ್ಟ್ರದಲ್ಲಿ ಕರಾಳ ದಿನ ಆಚರಿಸಿ, ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕು. ಈ ಮೂಲಕ ಬೆಳಗಾವಿಯಲ್ಲಿರುವ ಮರಾಠಿಗರನ್ನು ಬೆಂಬಲಿಸಬೇಕು’ ಎಂದು ಎಂಇಎಸ್‌ ನಾಯಕರು ಮಹಾರಾಷ್ಟ್ರದ ಮುಖ್ಯಮಂತ್ರಿ, ಸಚಿವರು ಹಾಗೂ ಶರದ್‌ ಪವಾರ್ ಮೊದಲಾದ ನಾಯಕರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖಂಡ ದೀಪಕ ದಳವಿ, ಎಂಇಎಸ್‌ ಯುವ ಅಘಾಡಿಯ ನಾಯಕರು ಈ ಪತ್ರ ಚಳವಳಿ ಮೂಲಕ ಮಹಾರಾಷ್ಟ್ರದ ನಾಯಕರ ಗಮನಸೆಳೆಯುವ ಯತ್ನ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಇನ್ನೊಂದೆಡೆ ಇಲ್ಲಿ ಕನ್ನಡಿಗರನ್ನು ಪ್ರಚೋದಿಸಲು ರಾಜ್ಯೋತ್ಸವದಂದು ಕಪ್ಪು ಬಣ್ಣದ ಲಕ್ಷ ಬಲೂನುಗಳನ್ನು ಹಾರಿಬಿಡುವ ಉಪಾಯವನ್ನು ಸಮಿತಿಯ  ಮುಖಂಡರು ಮಾಡಿದ್ದಾರೆ. ಬಲೂನುಗಳನ್ನು ತಾವೇ ಖರೀದಿಸಿ ಬೆಂಬಲಿಗರಿಗೆ ನೀಡುವ ಯೋಜನೆ ಅವರದಾಗಿದೆ. ‘ಜಿಲ್ಲಾಡಳಿತವು ಕರಾಳ ದಿನಾಚರಣೆಗೆ ಅನುಮತಿ ಕೊಡದಿದ್ದಲ್ಲಿ, ಕಾರ್ಯಕರ್ತರು ತಮ್ಮ ಮನೆಗಳ ಮೇಲಿಂದ ಕಪ್ಪು ಬಲೂನುಗಳನ್ನು ಹಾರಿಬಿಟ್ಟು ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆ  ದಾಖಲಿಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಬೇಡಿಕೆಗಳನ್ನು ಮಂಡಿಸಬೇಕು ಎಂದು ಸೂಚಿಸಿದ್ದಾರೆ’ ಎಂದು ತಿಳಿದುಬಂದಿದೆ.

ಈ ನಡುವೆ, ‘ಜಿಲ್ಲಾಡಳಿತದಿಂದ ಅನುಮತಿ ಕೊಡಲಿ, ಬಿಡಲಿ ಅಂದು ನಗರದಲ್ಲಿ ದ್ವಿಚಕ್ರವಾಹನ ರ‍್ಯಾಲಿ ನಡೆಸುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಪ್ರಕಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು