ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಾರ್ಮಿಕ ಕಲ್ಯಾಣ ಸುಂಕ ಸಂಗ್ರಹಕ್ಕೆ ಅಭಿಯಾನ

Last Updated 10 ನವೆಂಬರ್ 2021, 14:33 IST
ಅಕ್ಷರ ಗಾತ್ರ

ಬೆಳಗಾವಿ: ‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ನಿಯಮಗಳು 1998ರಲ್ಲಿ ಎಲ್ಲ ನಿರ್ಮಾಣ ಸಂಸ್ಥೆಗಳಿಂದ ನಿರ್ಮಾಣ ವೆಚ್ಚಕ್ಕೆ ತಗಲುವ ಮೊತ್ತದಲ್ಲಿ ಶೇ 1ರಷ್ಟು ಸುಂಕವನ್ನು ಸಂಗ್ರಹಿಸಲು ಆದೇಶ ಹೊರಡಿಸಲಾಗಿದೆ. ಸಂಗ್ರಹಣೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದು ಕಾರ್ಮಿಕ ಇಲಾಖೆಯ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಸುಂಕ ಸಂಗ್ರಹ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕಾಯ್ದೆ ಮತ್ತು ನಿಯಮಗಳನ್ವಯ ಅಧಿಸೂಚನೆಯ ಮೂಲಕ ವಹಿಸಲಾಗಿದೆ. ಕಾರ್ಮಿಕ ಅಧಿಕಾರಿಗಳನ್ನು ಸುಂಕ ನಿರ್ಧರಣಾಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ನೋಂದಾಯಿತ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಹಾಗೂ ಮಂಡಳಿಯ ವ್ಯಾಪ್ತಿ ವಿಸ್ತರಿಸಿ ಹೆಚ್ಚಿನ ಯೋಜನೆಗಳನ್ನು ಜಾರಿಗೊಳಿಸಲು ಸಾಕಷ್ಟು ಅನುದಾನದ ಅಗತ್ಯವಿದೆ. ಹೀಗಾಗಿ, ಈ ಕಾಯ್ದೆ ಜಾರಿಗೆ ತರಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕಾರ್ಯ ವ್ಯಾಪ್ತಿಯಲ್ಲಿ ಬರುವ ನಿರ್ಮಾಣ ಹಂತದಲ್ಲಿರುವ ಸಂಸ್ಥೆಗಳಿಗೆ ಭೇಟಿ ನೀಡಬೇಕು. ಸಂಸ್ಥೆಯು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ 1996ರ ಕಲಂ 7 ಹಾಗೂ ಕರ್ನಾಟಕ ನಿಯಮಗಳು 2006ರ ನಿಯಮ 15 ಮತ್ತು 16ರ ಅನ್ವಯ ನೋಂದಣಿ ಆಗಿರುವ ಕುರಿತು ಖಾತ್ರಿಪಡಿಸಿಕೊಳ್ಳಬೇಕು. ಕಾಯ್ದೆಯ ಕಲಂ 46ರ ಅನ್ವಯ ನಿಯೋಜಕರು/ ಮಾಲೀಕರು ನಿರ್ಮಾಣ ಕಾಮಗಾರಿಯ ಪ್ರಾರಂಭದ ಕುರಿತು ಸೂಚನಾಪತ್ರ ನೀಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಚರಂಡಿ, ಒಳಾಂಗಣ, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ ನಿರ್ಮಾಣ, ಕ್ಲಬ್ ಹೌಸ್, ಗೆಸ್ಟ್ ಹೌಸ್, ಈಜುಕೊಳ ಹಾಗೂ ಮಕ್ಕಳ ಆಟದ ಮೈದಾನದ ನಿರ್ಮಾಣ ವೆಚ್ಚವನ್ನು ಕೂಡ ಪರಿಗಣಿಸಲಾಗುವುದು’ ಎಂದು ಹೇಳಿದರು.

‘ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹಾಗೂ ನಿರ್ಮಾಣ ಪೂರ್ಣಗೊಂಡ ಎಲ್ಲಾ ಖಾಸಗಿ-ಸರ್ಕಾರಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು, ₹ 10 ಲಕ್ಷ ವೆಚ್ಚ ಮೀರಿದ ವೈಯಕ್ತಿಕ ಮನೆಗಳನ್ನು ಕೂಡ ಸುಂಕ ಪಾವತಿಗೆ ಪರಿಗಣಿಸಲಾಗುವುದು’ ಎಂದು ತಿಳಿಸಿದರು.

‘ನಮೂನೆಗಳ ಮೂಲಕ ಅರ್ಜಿ ನೀಡುವ ಕುರಿತು ಅರಿವು ಮೂಡಿಸಲಾಗುವುದು. ಚೆಕ್ ಅಥವಾ ಡಿಡಿ ಮೂಲಕ ಸುಂಕವನ್ನು ಸಂದಾಯ ಮಾಡುವ ವಿಧಾನ ಹಾಗೂ ಅಗತ್ಯ ಮಾಹಿತಿ ನೀಡಲಾಗುವುದು. ಕಾಯ್ದೆ ಉಲ್ಲಂಘಿಸಿರುವುದು ಕಂಡುಬಂದಲ್ಲಿ ನಿಯಮಾನುಸಾರ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳಾದ ತರನ್ನುಂ ಬೆಂಗಾಲಿ, ಸಹಾಯಕ ಕಾರ್ಮಿಕ ಆಯುಕ್ತ ಅನ್ಸಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT