ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗೊ ಸೇವೆ ಆರಂಭಕ್ಕೆ ಸಿದ್ಧತೆ

ಅಧಿಕಾರಿಗಳಿಂದ ಪರಿಶೀಲನೆ; ಮಾಹಿತಿ ಸಂಗ್ರಹ
Last Updated 17 ಜನವರಿ 2019, 13:21 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಾಂಬ್ರಾದಿಂದ ಕಾರ್ಗೋ ವಿಮಾನಸೇವೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಇಲ್ಲಿಗೆ ಗುರುವಾರ ಬಂದಿದ್ದ ನವದೆಹಲಿಯ ಕಾರ್ಗೋ ನಿರ್ದೇಶನಾಲಯದ ಅಧಿಕಾರಿ ಜಿ. ಗೋಕುಲ್ ನೇತೃತ್ವದ ಅಧಿಕಾರಿಗಳ ತಂಡದವರು, ಇಲ್ಲಿನ ಭಾಗಿದಾರರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸೇವೆಯಿಂದ ಆಗುವ ಅನುಕೂಲಗಳ ಕುರಿತು ಮಾಹಿತಿ ಪಡೆದರು.

ಉದ್ಯಮಿಗಳು, ವೃತ್ತಿಪರ ಎಂಜಿನಿಯರ್‌ಗಳ ವೇದಿಕೆ, ಕ್ರೆಡಾಯ್, ಕೈಗಾರಿಕಾ ಸಂಸ್ಥೆ ಪ್ರತಿನಿಧಿಗಳು, ನಾಗರಿಕರ ಪರಿಷತ್ತಿನ ಸದಸ್ಯರು, ವಿಶ್ವವಿದ್ಯಾಲಯದ ಪ್ರತಿನಿಧಿಗಳು ಭಾಗವಹಿಸಿದ್ದರು. ‘ಇಲ್ಲಿಂದ ಕಾರ್ಗೊ ವಿಮಾನ ಸೇವೆ ಆರಂಭಿಸಿದರೆ, ಕೃಷಿ, ತೋಟಗಾರಿಕೆ ಉತ್ಪನ್ನಗಳ ರಫ್ತು ಹಾಗೂ ಕೈಗಾರಿಕೆಗಳಿಗೆ ಬಹಳ ಅನುಕೂಲವಾಗಲಿದೆ. ಗೋವಾ ವಿಮಾನನಿಲ್ದಾಣವನ್ನು ಅವಲಂಬಿಸುವುದು ತಪ್ಪುತ್ತದೆ’ ಎಂಬ ಅಭಿ‍ಪ್ರಾಯಗಳನ್ನು ವ್ಯಕ್ತಪಡಿಸಿದರು.

‘ವಿಮಾನನಿಲ್ದಾಣದಲ್ಲಿರುವ ಹಳೆಯ ಪ್ರಯಾಣಿಕರ ಟರ್ಮಿನಲ್‌ ಕಟ್ಟಡವನ್ನು ದೇಸಿ ಏರ್‌ ಕಾರ್ಗೋ ಟರ್ಮಿನಲ್‌ ಆಗಿ ಪರಿವರ್ತಿಸಲಾಗುವುದು. ಶೀತಲೀಕರಣ ಘಟಕ ವ್ಯವಸ್ಥೆ, ಸ್ಟ್ರಾಂಗ್‌ ರೂಂ ವ್ಯವಸ್ಥೆ ಮಾಡಬೇಕಾಗುತ್ತದೆ. ಇದಕ್ಕಾಗಿ ಕ್ರಮ ವಹಿಸಲಾಗಿದೆ. ಈ ಸೇವೆ ಆರಂಭವಾಗುವುದರಿಂದ ಕೈಗಾರಿಕೆಗಳಿಗೆ ಪೂರಕವಾಗಲಿದೆ’ ಎಂದು ಗೋಕುಲ್ ತಿಳಿಸಿದರು.

ಕಾರ್ಗೋ ಸೇವೆಯನ್ನು ಕೂಡಲೇ ಆರಂಭಿಸುವಂತೆ ಒತ್ತಾಯಿಸಿ ನಾಗರಿಕ ಪರಿಷತ್ತಿನ ಅಧ್ಯಕ್ಷ ಸತೀಶ ತೆಂಡೂಲ್ಕರ್ ಹಾಗೂ ಶೇತ್ಕರಿ ಸಂಘಟನೆ ಅಧ್ಯಕ್ಷ ನಾರಾಯಣ ಸಾವಂತ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ಇದ್ದರು.

ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕಾರ್ಗೊ ವಿಮಾನಸೇವೆ ಆರಂಭಿಸುವ ಕುರಿತು ಕಾರ್ಯಸಾಧ್ಯತೆಯ ವರದಿ ಸಿದ್ಧಪಡಿಸಬೇಕು ಎಂದು ನಿರ್ಧರಿಸಲಾಗಿತ್ತು. ಇಲ್ಲಿನ ಹಳೆಯ ವಿಮಾನನಿಲ್ದಾಣ ಕಟ್ಟಡ ಬಳಸಿಕೊಂಡು ಕಾರ್ಗೋ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ. ಎಎಐ ಕಾರ್ಗೊ ಲಾಜಿಸ್ಟಿಕ್ಸ್‌ ಮತ್ತು ಅಲೈಡ್ ಸರ್ವಿಸ್ ಕಂಪನಿಯವರು ಅಗತ್ಯವಾದ ಸ್ಕ್ರೀನಿಂಗ್‌ ಮತ್ತು ಎಕ್ಸರೇ ಯಂತ್ರಗಳನ್ನು ಅಳವಡಿಸಲಿದ್ದಾರೆ. ಆರಂಭದಲ್ಲಿ ತರಕಾರಿ, ಹಣ್ಣು, ಹೂವು ಹಾಗೂ ಕೈಗಾರಿಕೆಗೆ ಸಂಬಂಧಿಸಿದ ಸರಕುಗಳನ್ನು ರವಾನಿಸಲು ಆದ್ಯತೆ ನೀಡಲಾಗುವುದು. ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಕಾರ್ಗೋ ಸೇವೆ ದೊರೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT