ಶನಿವಾರ, ಮೇ 28, 2022
28 °C
ಏಪ್ರಿಲ್ 1ರಿಂದ ಜಾರಿ: ಸಚಿವ ಉಮೇಶ ಕತ್ತಿ

ಪಡಿತರದಲ್ಲಿ ಅಕ್ಕಿ ಜೊತೆ ರಾಗಿ, ಜೋಳ ವಿತರಣೆಗೆ ಅನುಮೋದನೆ: ಉಮೇಶ ಕತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪಡಿತರದಲ್ಲಿ ಅಕ್ಕಿಯೊಂದಿಗೆ ರಾಗಿ ಮತ್ತು ಜೋಳ ವಿತರಣೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ’ ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಇಲ್ಲಿ ಶನಿವಾರ ತಿಳಿಸಿದರು.

‘ಪಡಿತರದಲ್ಲಿ ಅಕ್ಕಿ ಮತ್ತು ಗೋಧಿ ವಿತರಣೆಯ ಪ್ರಮಾಣ ಕಡಿತಗೊಳಿಸಲಾಗುವುದು. ಅದೇ ಪ್ರಮಾಣದಲ್ಲಿ ರಾಗಿ, ಜೋಳ ಅಥವಾ ಸ್ಥಳೀಯವಾಗಿ ಬಳಕೆಯಲ್ಲಿರುವ ಧಾನ್ಯ ವಿತರಿಸಲು ಅವಕಾಶ ಕೊಡುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವ ರಾವ್‌ಸಾಹೇಬ್‌ ದಾನ್ವೆ ಅವರನ್ನು ದೆಹಲಿಯಲ್ಲಿ ಈಚೆಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಉತ್ತರದ ಜಿಲ್ಲೆಗಳಲ್ಲಿ 3 ಕೆ.ಜಿ. ಜೋಳ ಮತ್ತು 2 ಕೆ.ಜಿ. ಅಕ್ಕಿ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ 3 ಕೆ.ಜಿ. ರಾಗಿ ಹಾಗೂ 2 ಕೆ.ಜಿ. ಅಕ್ಕಿ ಕೊಡಲಾಗುವುದು. ಭೌಗೋಳಿಕವಾಗಿ ಸ್ಥಳೀಯರ ಆಹಾರ ಪದ್ಧತಿಗೆ ಅನುಗುಣವಾಗಿ ಪಡಿತರ ವಿತರಿಸಬೇಕಾಗುತ್ತದೆ. ರಾಜ್ಯದಲ್ಲಿ ಈಗ ಅಕ್ಕಿ ಮತ್ತು ಗೋಧಿಯನ್ನು ಮಾತ್ರ  ಕೊಡಲಾಗುತ್ತಿದೆ. ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.  ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದರು.

‘ಫಲಾನುಭವಿಗಳಿಗೆ ನೀಡುವ ಒಟ್ಟು ಪಡಿತರ ಪ್ರಮಾಣದಲ್ಲಿ ಕಡಿತಗೊಳಿಸುತ್ತಿಲ್ಲ. ಬದಲಾವಣೆಯನ್ನೇ ಮಾಡುತ್ತೇವೆ. ಜನರು ಏನು ತಿನ್ನಲು ಬಯಸುತ್ತಾರೆಯೋ ಅದನ್ನು ಕೊಡುತ್ತಿದ್ದೇವೆ. ಸಂಪೂರ್ಣವಾಗಿ ಅಕ್ಕಿಯನ್ನೇ ಕೊಡಿ ಎಂದು ಜನರು ಒತ್ತಾಯಿಸಿದರೆ ಅಥವಾ ಪ್ರತಿಭಟಿಸಿದರೆ ವಿತರಿಸುತ್ತೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಬೆಳೆಯುವ ಜೋಳ, ಭತ್ತ ಹಾಗೂ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಏ.1ರಿಂದ ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪಕ್ಷದಿಂದ ನೋಟಿಸ್ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾವೆಲ್ಲಾರು ಸ್ನೇಹಿತರು. ನೋಟಿಸ್ ಬರುತ್ತವೆ. ಲವ್ ಲೆಟರ್‌ ಬೇಡವೆಂದರೂ ಬರುತ್ತಿರುತ್ತವೆ. ಆದರೆ, ಅವರೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ’ ಎಂದು ಸಮರ್ಥಿಸಿಕೊಂಡರು.

‘ಉತ್ತರ ಕರ್ನಾಟಕ ಅನ್ಯಾಯವಾದಾಗ ಪ್ರತಿಭಟನೆ ನಡೆಸಿಯೇ ನಡೆಸುತ್ತೇನೆ. ಮಂತ್ರಿಯಾಗಿದ್ದೇನೆಂದು ಸುಮ್ಮನಿರುವುದಿಲ್ಲ. ಯಾರೋ ಹೇಳಿದರೆಂದು ಮಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು