ಶನಿವಾರ, ಮಾರ್ಚ್ 28, 2020
19 °C

ದೇಶ ವಿಭಜಿಸುತ್ತಿರುವ ಕೇಂದ್ರದ ನಿರ್ಧಾರಗಳು: ಅರುಣಕುಮಾರ ಶ್ರೀವಾಸ್ತವ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೇಂದ್ರ ಸರ್ಕಾರವು ಜನರ ಅಭಿಪ್ರಾಯ ಪಡೆಯದೇ ಒಂದರ ಮೇಲೊಂದರಂತೆ ನಿರ್ಣಯ ಕೈಗೊಳ್ಳುತ್ತಿದ್ದು, ಇದು ದೇಶ ವಿಭಜನೆಯತ್ತ ಕೊಂಡೊಯ್ಯುತ್ತಿದೆ’ ಎಂದು ಸಮಾಜವಾದಿ ಹೋರಾಟಗಾರ, ಉತ್ತರಪ್ರದೇಶದ ಅರುಣಕುಮಾರ ಶ್ರೀವಾಸ್ತವ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಈ ನಡೆಯಿಂದಾಗಿ ನಾಗರಿಕ ಯುದ್ಧ ಉಂಟಾಗುವ ಸಾಧ್ಯತೆ ಇದ್ದು, ಇದನ್ನು ಎದುರಿಸಲು ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ’ ಎಂದರು. 

‘ಸಮಾಜವಾದಿ, ಮಹಾತ್ಮಗಾಂಧಿ ವಾದ ಹಾಗೂ ಅಂಬೇಡ್ಕರ್‌ ವಾದಗಳನ್ನು ಪ್ರಚಾರ ಪಡಿಸಲು ಸಮಾಜವಾದಿ ಸಮಾಗಮ ಸಂಘಟನೆ ವತಿಯಿಂದ ದೇಶದಾದ್ಯಂತ ಸಮಾಜವಾದಿ ವಿಚಾರಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಳೆದ ತಿಂಗಳು ಜನವರಿ 30ರಿಂದ ದೆಹಲಿಯಿಂದ ಯಾತ್ರೆ ಆರಂಭಗೊಂಡಿದೆ’ ’ ಎಂದರು.

‘ಕೇಂದ್ರ ಸರ್ಕಾರವನ್ನು ಮಹಾತ್ಮ ಗಾಂಧಿ ವಿಚಾರಧಾರೆಗಳಿಂದ ಎದುರಿಸಲು ಸಾಧ್ಯ. ಸತ್ಯಾಗ್ರಹದ ಮೂಲಕ ಸರ್ಕಾರವನ್ನು ಮಣಿಸಬಹುದಾಗಿದೆ. ಅದಕ್ಕಾಗಿ ಸತ್ಯಾಗ್ರಹಿಗಳನ್ನು ತಯಾರು ಮಾಡಲು ಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

ಹೋರಾಟಗಾರ, ಮಧ್ಯಪ್ರದೇಶದ ಡಾ.ಸುನೀಲಂ ಮಾತನಾಡಿ, ‘ಸಿಎಎ,  ಎನ್ಆರ್‌ಸಿ ಕುರಿತಾದ ಸಮಸ್ಯೆಗಳನ್ನು ಬಗೆಹರಿಸುವವರಿಗೆ ಜನರು ಜನಗಣತಿಯಲ್ಲಿ ಭಾಗವಹಿಸಬಾರದು’ ಎಂದು ಕರೆ ನೀಡಿದರು.

‘ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರನ್ನು ಭೇಟಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸಮಯವಿದೆ. ಆದರೆ, ಸಿಎಎ ವಿರುದ್ಧ ಹೋರಾಟ ನಡೆಸುತ್ತಿರುವ ಹೋರಾಟಗಾರರನ್ನು ಭೇಟಿಯಾಗಲು ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮೆರಿಕ ಜೊತೆ ಒಪ್ಪಂದ ಮಾಡಿಕೊಂಡರೆ, ಇಲ್ಲಿನ ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಇತರ ಕೃಷಿ ಆಧಾರಿತ ಚಟುವಟಿಕೆಗಳಿಗೆ ಭಾರಿ ಹೊಡೆತ ಬೀಳಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಿರುದ್ಯೋಗ ಸಮಸ್ಯೆ ದೇಶವನ್ನು ತೀವ್ರವಾಗಿ ಕಾಡುತ್ತಿದೆ. ಜಿಎಸ್‌ಟಿ, ನೋಟು ಅಮಾನ್ಯೀಕರಣ, ಜಿಡಿಪಿ ಕುಸಿತ ಸೇರಿದಂತೆ ಹಲವು ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಇವುಗಳನ್ನು ಬಗೆಹರಿಸದ ಹೊರತು, ನಾವ್ಯಾರೂ ರಾಷ್ಟ್ರೀಯ ನಾಗರಿಕರ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ’ ಎಂದರು.

‘ಮಹದಾಯಿ ಸಮಸ್ಯೆಯನ್ನು ಬೇಗನೇ ಇತ್ಯರ್ಥಗೊಳಿಸಬೇಕು, ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡಬೇಕು, ಫಸಲ್‌ ಬಿಮಾ ಯೋಜನೆಯ ಹಣ ಬಿಡುಗಡೆಗೊಳಿಸಬೇಕು, ಕಬ್ಬಿನ ಬಿಲ್‌ ಬಾಕಿ ಪಾವತಿಸಲು ಕ್ರಮಕೈಗೊಳ್ಳಬೇಕು ಹಾಗೂ ಕಬ್ಬಿಗೆ ನೀಡುತ್ತಿರುವ ದರವನ್ನು ಪ್ರತಿ ಕ್ವಿಂಟಲ್‌ಗೆ ₹ 4,000ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟಗಾರ ಬಿ.ಆರ್‌. ಪಾಟೀಲ ಮಾತನಾಡಿ, ‘ಈ ಯಾತ್ರೆಯು ಬೆಳಗಾವಿ ಮೂಲಕ ರಾಜ್ಯವನ್ನು ಪ್ರವೇಶಿಸಿದೆ. ಹಾವೇರಿ, ದಾವಣಗೆರೆ, ಚಿತ್ರದುರ್ಗ ಮೂಲಕ ಇದೇ 23ರಂದು ಬೆಂಗಳೂರಿಗೆ ತಲುಪಲಿದೆ. ಬಹಿರಂಗ ಸಭೆಯ ನಂತರ ತಮಿಳುನಾಡು, ಪಾಂಡಿಚೇರಿ, ಆಂಧ್ರ ಪ್ರದೇಶ ಮೂಲಕ ಸಂಚರಿಸಿ ತೆಲಂಗಾಣದಲ್ಲಿ ಅಕ್ಟೋಬರ್‌ 31ರಂದು ಕೊನೆಗೊಳ್ಳಲಿದೆ’ ಎಂದರು.

ಕರ್ನಾಟಕ ವಲಯದ ಸಂಯೋಜಕ ಅರವಿಂದ ದಳವಾಯಿ, ರೈತ ಮುಖಂಡ ಕಲ್ಯಾಣರಾವ ಮುಚಳಂಬಿ, ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)