ವಿದೇಶಿಗರ ಗಮನಸೆಳೆದ ಅಗ್ಗದ ಫಿಲ್ಟರ್‌

7
ಬೆಳಗಾವಿಯ ಪ್ರತಿಭೆ ನಿರಂಜನ್‌ ಆವಿಷ್ಕರಿಸಿದ ಸಾಧನ l ಸೇನೆಯಿಂದಲೂ ಬೇಡಿಕೆ

ವಿದೇಶಿಗರ ಗಮನಸೆಳೆದ ಅಗ್ಗದ ಫಿಲ್ಟರ್‌

Published:
Updated:

ಬೆಳಗಾವಿ: ನಗರದ ಎಂಜಿನಿಯರಿಂಗ್‌ ಪದವೀಧರ ನಿರಂಜನ್ ಕಾರಗಿ ಅತ್ಯಂತ ಕಡಿಮೆ ದರದ (₹ 30) ನೀರು ಶುದ್ಧೀಕರಣ ಉಪಕರಣವನ್ನು (ಫಿಲ್ಟರ್‌) ಅಭಿವೃದ್ಧಿಪಡಿಸಿದ್ದಾರೆ. ಇದನ್ನು ದೇಶ–ವಿದೇಶದಲ್ಲಿ ಮಾರುವ ಮೂಲಕ ತನ್ನದೇ ನವೋದ್ಯಮ ಆರಂಭಿಸಿದ್ದಾರೆ. ಯುವ ಪ್ರತಿಭೆಯ ಈ ತಂತ್ರಜ್ಞಾನವು ವಿದೇಶಿ ಕಂಪನಿಗಳ ಗಮನವನ್ನೂ ಸೆಳೆದಿದೆ.

‘ಅಲ್ಟ್ರಾಫಿಲ್ಟ್‌ರೇಶನ್‌ ಮೆಂಬ್ರೇನ್‌ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ಬೆರಳಿನ ಗಾತ್ರದ ಈ ಸಾಧನವನ್ನು ನೀರಿನ ಬಾಟಲಿಯ ಬಾಯಿಗೆ ಅಳವಡಿಸಬೇಕು. ನಂತರ ಬಾಟಲಿಯನ್ನು ಉಲ್ಟಾ ಮಾಡಿದರೆ, ನೀರು ಶುದ್ಧೀಕರಣಗೊಳ್ಳುತ್ತಾ ತೊಟ್ಟಿಕ್ಕುತ್ತದೆ. ಆಕ್ಟಿವೇಟೆಡ್‌ ಕಾರ್ಬನ್‌ ಬಳಸಲಾಗಿರುವ ಈ ಫಿಲ್ಟರ್‌, ನೀರು ಶುದ್ಧೀಕರಣದ ಜೊತೆಗೆ ಶೇ 80ರಷ್ಟು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಬಣ್ಣ ಹಾಗೂ ವಾಸನೆ ಹೋಗಲಾಡಿಸುತ್ತದೆ’ ಎನ್ನುತ್ತಾರೆ ನಿರಂಜನ್‌.

ಕಾಲೇಜಿನ ಪ್ರಾಜೆಕ್ಟ್‌: ‘ಒಂದು ಫಿಲ್ಟರ್‌ನಿಂದ 100 ಲೀಟರ್‌ನಷ್ಟು ನೀರು ಶುದ್ಧೀಕರಿಸಬಹುದು. ಈ ನೀರು ಸೇವನೆಗೆ ಯೋಗ್ಯವಾಗಿರುತ್ತದೆ. ಒಮ್ಮೆ ಬಳಕೆ ಆರಂಭಿಸಿದರೆ ಎರಡು ತಿಂಗಳವರೆಗೆ ಉಪಯೋಗಿಸಬಹುದು. ಜಿಎಸ್‌ಟಿ ಸೇರಿ ₹ 30ಕ್ಕೆ ಇದನ್ನು ಮಾರುತ್ತಿದ್ದೇನೆ. ಪ್ರಸ್ತುತ, ಇಷ್ಟು ಅಗ್ಗದ ಫಿಲ್ಟರ್‌ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ’ ಎನ್ನುತ್ತಾರೆ ಅವರು.‌

‘ಖಾಸಬಾಗ್‌ನ ನಮ್ಮ ಮನೆ ಎದುರಿನ ಸರ್ಕಾರಿ ಶಾಲೆ ಮಕ್ಕಳು ಕಲುಷಿತ ನೀರು ಕುಡಿಯುವುದನ್ನು ನೋಡಿದ್ದೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಉದ್ದೇಶದಿಂದ ಬಾಟಲಿಗೆ ಅಳವಡಿಸುವ ಫಿಲ್ಟರ್‌ ಅಭಿವೃದ್ಧಿಪಡಿಸುವ ಯೋಚನೆ ಬಂತು. ಅಂಗಡಿ ತಾಂತ್ರಿಕ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿಯಲ್ಲಿ 6ನೇ ಸೆಮಿಸ್ಟರ್‌ನಲ್ಲಿದ್ದಾಗ ಈ ಯೋಜನೆ ಸಿದ್ಧಪಡಿಸಿದ್ದೆ. ಇದಕ್ಕೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿದೆ. 2017ರಲ್ಲಿ ಪದವಿ ಮುಗಿಸಿದೆ. ನಂತರ ವಿವಿಧ ಶಾಲೆಗಳು, ಕಂಪನಿಗಳ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿದ್ದೆ. ಈವರೆಗೆ 15ಸಾವಿರಕ್ಕೂ ಹೆಚ್ಚಿನ ಸಾಧನಗಳನ್ನು ಮಾರಿದ್ದೇನೆ’ ಎಂದು ಮಾಹಿತಿ ನೀಡಿದರು.

ಸೇನೆಯವರಿಂದಲೂ ಖರೀದಿ: ‘ಅಮೆರಿಕದ ವಾಹಿನಿಯೊಂದರಲ್ಲಿ ಈ ಫಿಲ್ಟರ್‌ ಬಗ್ಗೆ ಹಲವು ದೇಶಗಳಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನು ಗಮನಿಸಿ ವಿದೇಶಗಳಿಂದಲೂ ಬೇಡಿಕೆ ಬಂದಿದೆ. ಆಫ್ರಿಕಾ, ಕತಾರ್‌ ಹಾಗೂ ಸಿಂಗಪುರದ ಕೆಲವು ಕಂಪನಿಗಳು ಈ ಫಿಲ್ಟರ್‌ ಖರೀದಿಸಿವೆ. ಫ್ರಾನ್ಸ್‌, ನ್ಯೂಜಿಲೆಂಡ್‌ ಕಂಪನಿಗಳ ಜೊತೆಗೆ ಮಾತುಕತೆ ನಡೆದಿದೆ. ಪ್ರಾತ್ಯಕ್ಷಿಕೆ ಮೆಚ್ಚಿಕೊಂಡ ಭಾರತೀಯ ಸೇನೆಯವರು ಕೂಡ ಒಂದು ಸಾವಿರ ಫಿಲ್ಟರ್‌ಗಳನ್ನು ಖರೀದಿಸಿದ್ದಾರೆ. ಕೋಲ್ಕತ್ತದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ತನ್ನ ಪ್ರಯೋಗಶಾಲೆಯಲ್ಲಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ಹೇಳಿದೆ. ರಾಜ್ಯ ಸರ್ಕಾರದಿಂದ ಆಯೋಜಿಸಿದ್ದ ‘ಎಲಿವೇಟ್–100’ ಸಮಾವೇಶದಲ್ಲಿ ಪ್ರಶಸ್ತಿ ದೊರೆತಿದೆ. ನವೋದ್ಯಮದ ಸಹಾಯಧನ ಕೂಡ ಮಂಜೂರು ಮಾಡಿದೆ’ ಎಂದು ತಿಳಿಸಿದರು.

‘₹ 12 ಸಾವಿರ ಹೂಡಿಕೆಯಿಂದ ಇದನ್ನು ಆರಂಭಿಸಿದ್ದೆ. ಈಗ, ‘ನಿರ್‍ನಲ್‌’ ಹೆಸರಿನ ಕಂಪನಿ ಆರಂಭಿಸಿ ಇದನ್ನೇ ಉದ್ಯಮ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಸುಧಾರಿತ ಅಲ್ಟ್ರಾಫಿಲ್ಟ್ರೇಷನ್‌ ತಂತ್ರಜ್ಞಾನ ಅಳವಡಿಸಲು ಯೋಜಿಸಲಾಗಿದೆ’ ಎಂದರು. ಸಂಪರ್ಕಕ್ಕೆ ಮೊ: 77953 39714.

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !