ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ ಪುರಸಭೆ: ವಿರೋಧ ಪಕ್ಷವೇ ಇಲ್ಲದ್ದೇ ದೊಡ್ಡ ಸವಾಲು

50 ವರ್ಷಗಳ ಇತಿಹಾಸದಲ್ಲಿ ವಿಶೇಷ ಅವಧಿ, 40 ಸಾವಿರ ಪಟ್ಟಣವಾಸಿಗಳಿಗೆ ಧ್ವನಿ ಯಾರು?
ಚಂದ್ರಶೇಖರ ಎಸ್. ಚಿನಕೇಕರ
Published : 14 ಸೆಪ್ಟೆಂಬರ್ 2024, 7:38 IST
Last Updated : 14 ಸೆಪ್ಟೆಂಬರ್ 2024, 7:38 IST
ಫಾಲೋ ಮಾಡಿ
Comments

ಚಿಕ್ಕೋಡಿ: ಈ ಬಾರಿ ಚಿಕ್ಕೋಡಿ ಪುರಸಭೆಯ ಚುನಾವಣೆ ಎಷ್ಟು ಸರಳವಾಗಿ ನಡೆಯಿತೋ, ಅಷ್ಟೇ ಕಠಿಣವಾದ ಸವಾಲುಗಳನ್ನೂ ಎದುರು ಹಾಕಿಕೊಂಡಿದೆ. 50 ವರ್ಷಗಳ ಪುರಸಭೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ವಿರೋಧ ಪಕ್ಷವೇ ಇಲ್ಲದ ಆಡಳಿತ ಮುಂದಲೆಗೆ ಬಂದಿದೆ. ಪಟ್ಟಣದ 40 ಸಾವಿರ ಜನರ ಧ್ವನಿ ಯಾರು ಎಂಬುದೇ ಪ್ರಶ್ನೆ.

ಸಾಂವಿಧಾನಿಕ ಆಶಯಗಳ ಈಡೇರುವಲ್ಲಿ, ಪ್ರಜಾಪ್ರಭುತ್ವದ ತತ್ವಗಳು ಸಾಕಾರಗೊಳ್ಳುವಲ್ಲಿ, ಆಡಳಿತ ಪಕ್ಷ ದಾರಿ ತಪ್ಪಿದಾಗ ಕಿವಿಹಿಂಡುವಲ್ಲಿ ವಿರೋಧ ಪಕ್ಷದ ಪಾತ್ರ ಬಹಳ ದೊಡ್ಡದು. ಆದರೆ, ಈಗ ಬದ್ಧ ವೈರಿ ಪಕ್ಷಗಳೆರಡೂ ಒಂದೇ ದೋಣಿಯಲ್ಲಿ ಸಾಗುತ್ತಿವೆ. ಈ ಹಡಗು ಹೇಗೆ ಸಾಗುತ್ತದೆ, ಎತ್ತ ಸಾಗುತ್ತದೆ ಎಂಬುದರ ಬಗ್ಗೆ ಜಿಲ್ಲೆಯ ಜನ ತೀವ್ರ ಕುತೂಹಲಿಗಳಾಗಿದ್ದಾರೆ.

ಬಿಜೆಪಿಯ ವೀಣಾ ಜಗದೀಶ ಕವಟಗಿಮಠ ಅಧ್ಯಕ್ಷರಾಗಿ, ಕಾಂಗ್ರೆಸ್‌ನ ಇರ್ಫಾನ್‌ ಬೇಪಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 23 ಸದಸ್ಯ ಬಲದಲ್ಲಿ 13 ಬಿಜೆಪಿ, 10 ಕಾಂಗ್ರೆಸ್ ಸದಸ್ಯರಿದ್ದಾರೆ. ಹೊಂದಾಣಿಕೆ ರಾಜಕಾರಣದ ಫಲವಾಗಿ ಒಳ ಒಪ್ಪಂದ ಮಾಡಿಕೊಂಡು ತಲಾ ಒಂದೊಂದು ಸ್ಥಾನವನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಹಂಚಿಕೊಂಡಿವೆ.

ಹಾಗಿದ್ದ ಮೇಲೆ ಸರಿ– ತಪ್ಪು, ಬೇಕು– ಬೇಡಗಳನ್ನು ಒರೆಗೆ ಹಚ್ಚಲು ಯಾರೂ ಇಲ್ಲದಂತಾಗಿದೆ. ‘ವಿರೋಧ ಪಕ್ಷವೇ ಪ್ರಜಾಪ್ರಭುತ್ವದ ಜೀವಂತಿಕೆಯ ಪ್ರತೀಕ’ ಎಂಬ ಮಾತು ಎಲ್ಲಕ್ಕಿಂತ ಇಲ್ಲಿ ಪ್ರಸ್ತುತವಾಗಿದೆ.

ಅಭಿವೃದ್ಧಿ ಕಾರ್ಯಗಳು ಕುಂಠಿತವಾದಲ್ಲಿ, ಅಕ್ರಮದ ಆರೋಪ ಕೂಗು ಕೇಳಿ ಬಂದಲ್ಲಿ, ಸರ್ಕಾರಿ ಯೋಜನೆಗಳು ವಿಳಂಬವಾದಲ್ಲಿ ಪ್ರಶ್ನೆ ಮಾಡುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಎಲ್ಲ 23 ವಾರ್ಡ್‌ಗಳಲ್ಲಿ ಚರಂಡಿ, ಶುದ್ಧ ಕುಡಿಯುವ ನೀರು, ಕಸ ವಿಲೇವಾರಿ, ಬೀದಿ ನಾಯಿಗಳ ಹಾವಳಿ, ಬಿಡಾಡಿ ದನಗಳ ನಿರ್ವಹಣೆ, ಆರೋಗ್ಯ ಸಮಸ್ಯೆ, ಮನೆ ನಿರ್ಮಾಣ, ಉದ್ಯಾನ ನಿರ್ಮಾಣ, ಹೊಸ ಬಡಾವಣೆಗಳ ಅಭಿವೃದ್ಧಿ ಸವಾಲುಗಳಿಗೆ ಧ್ವನಿ ಕೊಡುವವರು ಯಾರು ಎಂಬುದು ಜನರ ಪ್ರಶ್ನೆ.

ಅನಿವಾರ್ಯವಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ
ಲಕ್ಷಣರಾವ್ ಚಿಂಗಳೆ ಅಧ್ಯಕ್ಷ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌
ಚಿಕ್ಕೋಡಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಒಳ್ಳೆಯ ಆಡಳಿತ ನೀಡುತ್ತೇವೆ
ಜಗದೀಶ ಕವಟಗಿಮಠ ಪುರಸಭೆ ಸದಸ್ಯ
ಈ ಹಿಂದೆ ನಾನೂ ಸದಸ್ಯನಾಗಿ ಅಧಿಕಾರ ನಿರ್ವಹಿಸಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿದಿದ್ದು ಇದೇ ಮೊದಲು
ಪ್ರಭಾಕರ ಐ. ಕೋರೆ ಮಾಜಿ ಅಧ್ಯಕ್ಷ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT