ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದಾಗಿ ಕಲಾವಿದರಿಗೆ ತೊಂದರೆ: ಜೀವನ ನಿರ್ವಹಣೆಗೆ ‘ಸರ್ಕಸ್‌’

ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಸರ್ಕಸ್ ಕಂಪನಿಗಳನ್ನು ನಂಬಿಕೊಂಡಿದ್ದವರುಕೋವಿಡ್ ಕಾರಣದಿಂದಾಗಿ ಜೀವನ ನಿರ್ವಹಣೆಗೆ ಅಕ್ಷರಶಃ ಸರ್ಕಸ್ ಮಾಡುತ್ತಿದ್ದಾರೆ.

ತಮ್ಮಲ್ಲಿರುವ ಕಲಾತ್ಮಕ ಕಸರತ್ತಿನಿಂದ ಸಾಹಸದೊಂದಿಗೆ ಸರ್ಕಸ್ ಮಾಡಿ ಜನರಿಗೆ ಮನರಂಜನೆ ನೀಡುವ ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲ್ಲೂಕಿನ ಸೂಪರ ಸ್ಟಾರ್ ಸರ್ಕಸ್ ಕಂಪನಿಯ ಮಾಲೀಕ ಪ್ರಕಾಶ ಮಾನೆ ಇಲ್ಲಿ ಕ್ಯಾಂಪ್ ಹಾಕಿದ್ದರು. 35 ವರ್ಷಗಳಿಂದ ಕಂಪನಿ ಮುಂದುವರಿಸುತ್ತಿರುವ ಅವರು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರ, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ನೂರಾರು ಕಲಾವಿದರನ್ನು ಸಂಘಟಿಸಿ ಕ್ಯಾಂಪ್ ಹಾಕುತ್ತಿದ್ದಾರೆ. ಸದ್ಯ ಚಿಕ್ಕೋಡಿಯಲ್ಲಿ ಕ್ಯಾಂಪ್ ಹಾಕಿ ಸರ್ಕಸ್ ಪ್ರಾರಂಭಿಸಿತ್ತು. ಒಂದು ವಾರ ಕಾಲ ಜನದಟ್ಟನೆಯಿಂದ ತುಂಬಿತ್ತು. ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ಆರಂಭಿಸಿದ್ದಿರಂದ ಬಸ್‌ ಸಂಚಾರ ಬಂದ್ ಆದ್ದರಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಯಿತು.

ಬರೆ ಎಳೆದಿದೆ

ಹೋದ ತಿಂಗಳ ಕೊನೆಯ ವಾರದಲ್ಲಿ ಕೊರೊನಾ ಕಂಟಕ ಪ್ರಾರಂಭವಾಗಿ ಸರ್ಕಾರದ ಆದೇಶದಂತೆ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಸರ್ಕಸ್ ಕಂಪನಿ ಕ್ಯಾಂಪ್ ಬಂದ್ ಆಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

‘ಹೋದ ವರ್ಷ ಕೋವಿಡ್ ಸಂದರ್ಭದಲ್ಲಿ ಪುಣೆಯಲ್ಲಿದ್ದೆವು. ಆಗಲೂ ತೊಂದರೆ ಅನುಭವಿಸಿದ್ದೇವೆ. ಈ ವರ್ಷವೂ ಅಂಥಾದ್ದೆ ಪರಿಸ್ಥಿತಿ ಎದುರಾಗಿದೆ. ಕಂಪನಿಯಲ್ಲಿ 150 ಕಲಾವಿದರಿದ್ದು, ಅವರ ಮುಂದಿನ ಜೀವನ ನಡೆಸುವುದು ಕಷ್ಟದಾಯಕವಾಗಿದೆ’ ಎಂದು ಮಾಲೀಕ ಪ್ರಕಾಶ ಮಾನೆ ತಿಳಿಸಿದರು.

ನಡೆಸುವುದೇ ಸವಾಲು

‘ಸರ್ಕಸ್ ಪ್ರಾರಂಭವಾದಾಗ ಇದ್ದ ಸಂತೋಷ ಈಗ ಇಲ್ಲ. ಕ್ಯಾಂಪ್ ಹಾಕಲು ₹ 5ರಿಂದ 6 ಲಕ್ಷ ಖರ್ಚು ಬರುತ್ತದೆ. ಕಲಾವಿದರ ಸಂಭಾವನೆ, ಪ್ರಚಾರ, ವಾಹನಗಳ ಖರ್ಚುಗಳು, ಊಟ–ಉಪಾಹಾರಗಳನ್ನೆಲ್ಲ ಸರಿದೂಗಿಸಿಕೊಂಡು ಹೋಗುವುದು ಒಂದೆಡೆಯಾದರೆ, ಕಂಪನಿ ಮುನ್ನಡೆಸುವುದು ದೊಡ್ಡ ಸರ್ಕಸ್ ಆಗಿದೆ. ಈಗ ಲಾಕ್‌ಡೌನ್‌ನಿಂದಾಗಿ ದಿಕ್ಕೇ ತೋಚದಂತಾಗಿದೆ’ ಎಂದು ಅಳಲು ತೋಡಿಕೊಂಡರು.

‘ವಿವಿಧ ಕಲೆ, ಕ್ರೀಡಾ ಕ್ಷೇತ್ರದಲ್ಲಿ ದುಡಿದವರಿಗೆ ಮಾಸಾಶನವನ್ನು ಸರ್ಕಾರ ನೀಡುತ್ತಿದೆ. ಸರ್ಕಸ್ ಕಂಪನಿಗಳಲ್ಲಿ ಸಾಹಸ ಪ್ರದರ್ಶನ ನೀಡುವಂತಹ ಕಲಾವಿದರಿಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಸಾಶನದ ಜೊತೆಗೆ ಕಂಪನಿ ನಡೆಸಲು ಆರ್ಥಿಕ ನೆರವು ಕಲ್ಪಿಸಿದರೆ ಈ ಕಲೆ ಉಳಿಸಿಕೊಳ್ಳಬಹುದು. ಇಂತಹ ಬಡ ಕಂಪನಿಗಳಿಗೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಆರ್ಥಿಕ ಸಹಾಯ, ಉಪಜೀವನಕ್ಕೆ ದವಸ ಧಾನ್ಯ ನೀಡುವುದು ಅತ್ಯವಶ್ಯವಾಗಿದೆ. ಕೋವಿಡ್ ಸಂಕಷ್ಟದಲ್ಲಿ ಮಾನವೀಯತೆಯಿಂದ ಕೈ ಜೋಡಿಸುವುದು ಅಗತ್ಯವಾಗಿದೆ’ ಎನ್ನುತ್ತಾರೆ ಕಲಾವಿದ ಭರತ ಕಲಾಚಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT