ಸೋಮವಾರ, ಅಕ್ಟೋಬರ್ 18, 2021
25 °C

ಗುಲಾಮಗಿರಿಯ ಶಿಕ್ಷಣ ನೀತಿಗೆ ತಿಲಾಂಜಲಿ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಣ-ಪ್ರಾತಿನಿಧಿಕ ಚಿತ್ರ

ಬೆಳಗಾವಿ: ‘ಕಾಂಗ್ರೆಸ್‌ನವರದು ಗುಲಾಮಗಿರಿಯ ಶಿಕ್ಷಣ ನೀತಿಯಾಗಿತ್ತು. ನಮ್ಮದು ಭಾರತೀಯರಿಂದ, ಭಾರತೀಯರಿಗೋಸ್ಕರ ಹಾಗೂ ನಮ್ಮ ಮಕ್ಕಳ ಭವಿಷ್ಯ ಬರೆಯುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಹಿಂದವಾಡಿಯ ಮಹಾವೀರ ಭವನದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ನಗರಪಾಲಿಕೆ ಬಿಜೆಪಿ ಸದಸ್ಯರ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನೂರು ವರ್ಷ ಹಳೆಯ ಮೆಕಾಲೆ, ಇಂಗ್ಲಿಷರ ಹಾಗೂ ಗುಲಾಮಗಿರಿಯ ಶಿಕ್ಷಣ ನೀತಿ ಇತ್ತು. ಶಿಕ್ಷಣದ ಇತಿಹಾಸ ನೋಡಿದಾಗ, ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಭಾರತೀಯತೆಯನ್ನು ಕಾಣುವುದಿಲ್ಲ. ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಶಿಕ್ಷಣವನ್ನು ಮೆಕಾಲೆ ನೀಡಿದ್ದರು. ಕೇವಲ ವಿದೇಶಿ ಸಂಸ್ಕೃತಿ, ಅವರ ಇತಿಹಾಸ ಹಾಗೂ ನಮ್ಮನ್ನು ಆಕ್ರಮಣ ಮಾಡಿದವರ ಇತಿಹಾಸ ಮತ್ತು ವೈಭವೀಕರಣದ ವಿಷಯವನ್ನಷ್ಟೆ ನಾವು ನೋಡಿದ್ದೇವೆ’ ಎಂದು ಆರೋಪಿಸಿದರು. ‘ಇದನ್ನು ಬದಲಾಯಿಸುತ್ತೇವೆ’ ಎಂದರು.

‘ಬದಲಾಗುತ್ತಿರುವ ಶತಮಾನದಲ್ಲಿ ಭಾರತದ ಮಕ್ಕಳ ಭವಿಷ್ಯ ಬರೆಯುವಂತಹ ನೀತಿ ಇದಾಗಿದೆ. ಗ್ರಾಮೀಣ ಪ್ರದೇಶದ ನಮ್ಮ ಮಕ್ಕಳು ವಿದೇಶದಲ್ಲಿ  ಇರುವಂತಹ ಅತ್ಯಾಧುನಿಕ ಶಿಕ್ಷಣ ಪಡೆಯುವ ಮಕ್ಕಳೊಂದಿಗೆ ಪೈಪೋಟಿ ನೀಡುವಂತೆ ಸಿದ್ಧಗೊಳಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ನೀಡಿರುವ ನೀತಿಯನ್ನು ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದರು.

‘ಧಾರ್ಮಿಕ ಪೂಜಾ ಸ್ಥಳಗಳನ್ನು ರಕ್ಷಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಈ ವಿಷಯದಲ್ಲಿ ಎಲ್ಲ ಸಂಘಟನೆಗಳ ಸಲಹೆ ಸ್ವೀಕರಿಸಲು ಸಿದ್ಧವಿದ್ದೇವೆ. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಸನಾತನ ಧರ್ಮ ನಮ್ಮದು. ಇಡೀ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ದಿನಗಳು ಬರಲಿವೆ’ ಎಂದು ಹೇಳಿದರು.

‘ಬಿಜೆಪಿ ರಾಷ್ಟ್ರೀಯ ಪಕ್ಷ ಮಾತ್ರವಲ್ಲ ರಾಷ್ಟ್ರೀಯತೆಯ ಗುಣಧರ್ಮದ ‍ಪಕ್ಷ. ಸೇವೆಯು ಇನ್ನೊಂದು ಗುಣ ಧರ್ಮ. ಎಲ್ಲರನ್ನೂ ಒಳಗೊಂಡು ದೇಶದ ಐಕ್ಯತೆ, ಅಖಂಡತೆಗೆ ಶ್ರಮಿಸುತ್ತಿದೆ. ಶುದ್ಧ, ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡುತ್ತಿದೆ. ಇತರ ಪಕ್ಷಗಳು ರಾಷ್ಟ್ರೀಯತೆಯ ವಿರೋಧಿಯಾಗಿದ್ದು ಕೇವಲ ಸ್ವಾರ್ಥ ಮೆರೆಯುತ್ತಿವೆ. ಹೀಗಾಗಿ, ಜನರು ಅವರನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು