ಕೌಜಲಗಿ: ‘ನಮ್ಮವರ ಕುತಂತ್ರದಿಂದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಸೆರೆ ಹಿಡಿದರು. ಒಳ್ಳೆಯ ಕೆಲಸ ಮಾಡುವವರ ಹಿಂದೆ ಇಂಥವರು ಇರುತ್ತಾರೆ. ಹಿಂದುಳಿದ ಸಮುದಾಯಕ್ಕೆ ಸೇರಿದ ನಾನು ಮುಖ್ಯಮಂತ್ರಿ ಆಗಿರುವುದು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗ್ರಾಮದಲ್ಲಿ ಸೋಮವಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮತ್ತು ಕೋಟೆ ಉದ್ಘಾಟಿಸಿದ ಅವರು, ಸಂಗೊಳ್ಳಿ ರಾಯಣ್ಣನ ಬದುಕಿಗೂ ಮತ್ತು ತಮ್ಮ ಇಂದಿನ ಪರಿಸ್ಥಿತಿಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬರ್ಥದಲ್ಲಿ ಮಾತನಾಡಿದರು.
‘ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ದೇಶದ್ರೋಹಿಗಳು ಈಗಲೂ ಇಲ್ಲಿದ್ದಾರೆ. ಹಿಂದುಳಿದ ಸಮುದಾಯದವರು ಅಧಿಕಾರದಲ್ಲಿ ಇರಬಾರದು ಎಂಬುದೇ ಅವರ ಸಿದ್ಧಾಂತ. ಇದೇ ಕಾರಣಕ್ಕೆ ಯಾವುದೇ ತಪ್ಪು ಮಾಡದಿದ್ದರೂ ನನ್ನ ವಿರುದ್ಧ ಕುತಂತ್ರ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.
‘ಬಿಜೆಪಿಯ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನನ್ನ ಪರ ಇದ್ದರೆ, ಅವರ ಸಹಪಾಠಿಗಳು (ಬಿಜೆಪಿಯವರು) ನನ್ನ ವಿರುದ್ಧ ಇದ್ದಾರೆ. ಹೇಗಾದರೂ ಮಾಡಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನ ನಡೆಸಿದ್ದಾರೆ’ ಎಂದರು.
ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಮುಖ್ಯಸಚೇತಕ ಅಶೋಕ ಪಟ್ಟಣ, ಶಾಸಕ ಬಾಲಚಂದ್ರ ಜಾರಕಿಹೊಳಿ, ಬಾಗೋಜಿಕೊಪ್ಪ ಮಠದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಇದ್ದರು.
ನಾನು ಯಾವ ತಪ್ಪೂ ಮಾಡಿಲ್ಲ. ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳ ಆಶೀರ್ವಾದ ನನ್ನ ಮತ್ತು ನಮ್ಮ ಸರ್ಕಾರದ ಮೇಲೆ ಇರುವವರೆಗೆ ನನ್ನನ್ನು ಕೆಳಗಿಳಿಸಲು ಆಗುವುದಿಲ್ಲ.