ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಪೌರಕಾರ್ಮಿಕರಿಗೆ ನೇರವಾಗಿ ವೇತನ ನೀಡಲು 15 ದಿನ ಗಡುವು: ಜಗದೀಶ ಹಿರೇಮನಿ

ಅಧಿಕಾರಿಗಳ ಸಭೆ ನಡೆಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ
Last Updated 27 ಸೆಪ್ಟೆಂಬರ್ 2018, 11:22 IST
ಅಕ್ಷರ ಗಾತ್ರ

ಬೆಳಗಾವಿ: ‘ಗುತ್ತಿಗೆ ಪೌರಕಾರ್ಮಿಕರಿಗೆ ವೇತನವನ್ನು ನೇರವಾಗಿ ನೀಡಬೇಕು ಎನ್ನುವ ರಾಜ್ಯ ಸರ್ಕಾರದ ಸೂಚನೆಯನ್ನು ಪಾಲಿಕೆಯಲ್ಲಿ 15 ದಿನಗಳಲ್ಲಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಇಲ್ಲಿ ತಿಳಿಸಿದರು.

‘ಸರ್ಕಾರದ ಆದೇಶ ಜಾರಿಗೊಳಿಸುವುದು ತಾಂತ್ರಿಕ ಕಾರಣಗಳಿಂದಾಗಿ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಕಾಲಾವಕಾಶ ನೀಡಲಾಗಿದೆ. ಆಗಲೂ ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.‌

‘ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರ ನೇಮಕಾತಿಯನ್ನು ಸರ್ಕಾರಗಳು ನಿಲ್ಲಿಸಲಿವೆ. ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ 13ಸಾವಿರ ಮಂದಿ ನೇಮಕ ಪ್ರಕ್ರಿಯೆ ಆರಂಭಿಸಿದೆ. ಈ ಪೈಕಿ ಬೆಳಗಾವಿಗೆ 548 ಹುದ್ದೆಗಳು ದೊರೆತಿವೆ. 2ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಈಗಾಗಲೇ ಇರುವ ಗುತ್ತಿಗೆ ಪೌರಕಾರ್ಮಿಕರಿಗೆ ಆದ್ಯತೆ ನೀಡಲಾಗುವುದು. ಕನಿಷ್ಠ 3 ವರ್ಷ ಕೆಲಸ ಮಾಡಿದವರು ಹಾಗೂ ವೇತನ ಪಡೆದಿರುವುದಕ್ಕೆ ದಾಖಲೆ ಇರುವವರು ಅರ್ಹರಾಗುತ್ತಾರೆ’ ಎಂದು ಮಾಹಿತಿ ನೀಡಿದರು.

ಹಕ್ಕುಪತ್ರ ಕೊಡಿಸಲು

‘ಪೌರಕಾರ್ಮಿಕರಿಗಾಗಿ ರಾಜ್ಯದಾದ್ಯಂತ 3ಸಾವಿರ ಕ್ವಾರ್ಟಸ್‌ಗಳಿವೆ. 40, 50 ವರ್ಷಗಳ ಹಿಂದೆ ಅವುಗಳನ್ನು ಹಂಚಿಕೆ ಮಾಡಲಾಗಿದೆ. ಕೆಲವರು ನಿಧನರಾಗಿದ್ದಾರೆ. ಅಲ್ಲಿ ಅವಲಂಬಿತರು ವಾಸವಿದ್ದಾರೆ. ಹೀಗಾಗಿ, ಅವರ ಹೆಸರಿಗೇ ಹಕ್ಕುಪತ್ರ ಕೊಡಬೇಕು ಎನ್ನುವ ಬೇಡಿಕೆ ಇದೆ. ಇದನ್ನು ಈಡೇರಿಸಲು ಸರ್ಕಾರದೊಂದಿಗೆ ವ್ಯವಹರಿಸಲಾಗುವುದು’ ಎಂದು ಸ್ಪಷ್ಪಪಡಿಸಿದರು.

‘ಕಾಯಂ ಪೌರಕಾರ್ಮಿಕರ ನೇಮಕಾತಿಗೆ ಎಸ್‌ಎಸ್‌ಎಲ್‌ಸಿ ಕನಿಷ್ಠ ವಿದ್ಯಾರ್ಹತೆ ಇರಬೇಕು (ಪಂಚಾಯ್ತಿಗಳಲ್ಲಿ ನೇಮಕಕ್ಕೆ) ಎಂದು ಸರ್ಕಾರ ಆದೇಶಿಸಿರುವುದು ಅವೈಜ್ಞಾನಿಕವಾಗಿದೆ. ಇದರಿಂದ 20–30 ವರ್ಷದ ಹಿಂದಿನಿಂದಲೂ ಕೆಲಸ ಮಾಡುತ್ತಿರುವವರಿಗೆ ಅನ್ಯಾಯವಾಗುತ್ತದೆ. ಹೀಗಾಗಿ, ಈ ನಿರ್ಬಂಧ ವಿಧಿಸಬಾರದು ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಶಶಿಧರ ಕುರೇರ, ‘ನಿಯಮ ಪಾಲಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸಲಕರಣೆಗಳನ್ನು ಕಡ್ಡಾಯವಾಗಿ ಬಳಸುವಂತೆ ನೋಡಿಕೊಳ್ಳಬೇಕು ಎಂದೂ ತಿಳಿಸಲಾಗಿದೆ. ಪಿಎಫ್‌, ಇಎಸ್‌ಐ ತುಂಬಿರುವುದನ್ನು ಖಾತ್ರಿಪಡಿಸಿಕೊಂಡ ನಂತರವಷ್ಟೇ ಗುತ್ತಿಗೆದಾರರಿಗೆ ಬಿಲ್‌ ನೀಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT