ಮಂಗಳವಾರ, ಏಪ್ರಿಲ್ 13, 2021
23 °C

ಬೀದಿ ದೀಪಗಳ ನಿರ್ವಹಣೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನಗರದಾದ್ಯಂತ ಬೀದಿ ದೀಪಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಂದ ದೂರುಗಳು ಬಂದ ಕೂಡಲೇ ಸಮಸ್ಯೆ ನಿವಾರಿಸಬೇಕು’ ಎಂದು ನಗರಪಾಲಿಕೆ ನೂತನ ಆಯುಕ್ತ ಅಶೋಕ ದುಡಗುಂಟಿ ಸೂಚಿಸಿದರು.

‘ಪ್ರಜಾವಾಣಿ’ಯಲ್ಲಿ ಸೋಮವಾರ ಪ್ರಕಟವಾದ ವರದಿ ಆಧರಿಸಿ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಸಂಬಂಧಿಸಿದ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರ ಸಂಚಾರ ಮಾಡಬೇಕು. ಎಲ್ಲೆಲ್ಲಿ ಬಲ್ಬ್‌ಗಳು ಹಾಳಾಗಿವೆಯೋ ಅವುಗಳನ್ನು ತ್ವರಿತವಾಗಿ ಬದಲಿಸಬೇಕು. ಅವಶ್ಯವಿರುವ ಕಡೆಗಳಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ತಾಕೀತು ಮಾಡಿದರು.

ಕ್ರಮ ಕೈಗೊಳ್ಳಲಿ
ನಗರದಲ್ಲಿ ರಾತ್ರಿ ವೇಳೆ ಬೀದಿದೀಪಗಳು ಬೆಳಗದೇ ಇದ್ದರೆ ಮಹಿಳೆಯರು, ಮಕ್ಕಳಿರಲಿ ಪುರುಷರು ಕೂಡ ಓಡಾಡುವುದಕ್ಕೆ ಕಷ್ಟವಾಗುತ್ತದೆ. ಕೆಲವು ದುಷ್ಟಶಕ್ತಿಗಳು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ದುಷ್ಕೃತ್ಯಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ವಿದ್ಯುದ್ದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಉಪಯೋಗವಾಗುತ್ತದೆ.
-ಕಿರಣ ಯಲಿಗಾರ, ಮುನವಳ್ಳಿ

**
ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು
ಬೆಳಗಾವಿ ನಗರದ ಕೆಲವು ಬೀದಿಗಳಲ್ಲಿ ವಿದ್ಯುದ್ದೀಪಗಳು ಬೆಳಗುತ್ತಿಲ್ಲದಿರುವ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿದೆ. ಸಂಬಂಧಿಸಿದ ನಗರಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆಯಲ್ಲಿ ಓಡಾಡುವ ಜನರಿಗೆ ಅನಕೂಲ ಮಾಡಿಕೊಡಬೇಕು. ಈ ಮೂಲಕ ಅನಾಹುತ, ಅಪಘಾತಗಳನ್ನು ತಪ್ಪಿಸಬೇಕು. ಸ್ಮಾರ್ಟ್‌ ಸಿಟಿಯ ಹೆಸರು ಉಳಿಸಬೇಕು.
-ಬಿ.ಎಸ್. ಮುಳ್ಳೂರ ಹಲಗತ್ತಿ

**
ಪುಣೆ–ಬೆಂಗಳೂರು ರಸ್ತೆಯಲ್ಲಿ ಹಿಂಡಾಲ್ಕೊ ಕಡೆಯಿಂದ ನಗರ ಪ್ರವೇಶಿಸುವ ರಸ್ತೆಯಲ್ಲೂ ಕಗ್ಗತ್ತಲು ತುಂಬಿಕೊಂಡಿರುತ್ತದೆ. ಅಲ್ಲಿ ಬೀದಿದೀಪಗಳೇ ಇಲ್ಲ. ಅಚ್ಚರಿ ಎಂದರೆ ಅಲ್ಲಿಗೆ ಸಮೀಪದಲ್ಲಿಯೇ ಹೆಸ್ಕಾಂ ಕಚೇರಿ ಇದೆ! ರಾತ್ರಿ ವೇಳೆ ನಗರದ ಬಹುತೇಕ ಕಡೆಗಳಲ್ಲಿ ಕತ್ತಲು ತುಂಬಿರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು. ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು.
-ಅಕ್ಷಯ್ ಕಾಂಬ್ಳೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.