ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭದಲ್ಲಿ ಗೊಂದಲ, ನಂತರ ಸುಗಮ

Last Updated 2 ಮೇ 2021, 17:10 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಆರ್‌‍ಪಿಡಿ ಕಾಲೇಜಿನಲ್ಲಿ ಭಾನುವಾರ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯು ಆರಂಭದಲ್ಲೇ ಗೊಂದಲ, ನಂತರ ಸುಗಮವಾಗಿ ನಡೆಯಿತು.

ಮೊದಲು ತೆರೆಯಬೇಕಾದ ಸ್ಟ್ರಾಂಗ್ ರೂಂ ಯಾವುದು ಎನ್ನುವುದು ಗೊಂದಲಕ್ಕೆ ಕಾರಣವಾಯಿತು. ನಿಗದಿತ ಕೊಠಡಿ ಬದಲಿಗೆ ಬೇರೆ ಕಡೆಗೆ ತಮ್ಮನ್ನು ಕರೆದುಕೊಂಡು ಹೋದ ಸಿಬ್ಬಂದಿ ವಿರುದ್ಧ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ. ಹರೀಶ್ ಕುಮಾರ್ ಗರಂ ಆದರು. ಆ ಕೊಠಡಿ ಬಳಿ ಚುನಾವಣಾ ವೀಕ್ಷಕರು ಇರಲಿಲ್ಲ. ಇದರಿಂದ ಸಿಬ್ಬಂದಿ ಮೇಲೆ ಅವರು ಸಿಟ್ಟಾದ ಪ್ರಸಂಗವೂ ನಡೆಯಿತು.

ಕೆಳಗಿನ ಮಹಡಿಯಲ್ಲಿರುವ ಮತ್ತೊಂದು ಸ್ಟ್ರಾಂಗ್ ರೂಂಗೆ ಬಂದರು. ಆದರೆ, ಅಲ್ಲಿ ನಿಯಮಾವಳಿ ಪ್ರಕಾರ ಸ್ಟ್ರಾಂಗ್ ರೂಂ ತೆರೆಯುವ ನಿಗದಿತ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಸಿಬ್ಬಂದಿಗಾಗಿ ಅವರು ಚುನಾವಣಾ ಏಜೆಂಟರೊಂದಿಗೆ ಕಾಯಬೇಕಾಯಿತು. ಕೆಲವು ನಿಮಿಷಗಳ ಬಳಿಕ ಸಿಬ್ಬಂದಿ ಬಂದ ನಂತರ, ಅವರಿಂದ ಬಾಗಿಲುಗಳನ್ನು ನಿಯಮಾವಳಿಯಂತೆ ತೆಗೆಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಲು ಒಂದು ಕೊಠಡಿಯಲ್ಲಿ ಕೇವಲ ಎರಡು ಟೇಬಲ್‌ಗಳಲ್ಲಿ ಎಣಿಕೆ ಕಾರ್ಯ. ಕೊಠಡಿಯಲ್ಲಿ ಒಟ್ಟು 15 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕೆಲವರು ಪಿಪಿಇ ಕಿಟ್ ಧರಿಸಿ ಪಾಲ್ಗೊಂಡಿದ್ದರು. ಅಲ್ಲಲ್ಲಿ ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ತಪಾಸಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೇಂದ್ರ ಪ್ರವೇಶಿಸುವ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿತ್ತು.

ಫಲಿತಾಂಶ ಪ್ರಕಟಗೊಳ್ಳುವವರೆಗೂ ಬಿಜೆಪಿಯ ಮಂಗಲಾ ಅಂಗಡಿ ಕೇಂದ್ರದತ್ತ ಬಂದಿರಲಿಲ್ಲ. ಗೆಲುವು ಖಚಿತವಾದ ಬಳಿಕ ಬಂದು ಪ್ರಮಾಣಪತ್ರ ಪಡೆದರು. ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಕೇಂದ್ರದತ್ತ ಸುಳಿಯಲಿಲ್ಲ.

ಕೋವಿಡ್, ಕರ್ಫ್ಯೂ ಹಾಗೂ ನಿಷೇಧಾಜ್ಞೆ ಕಾರಣದಿಂದ ಕೇಂದ್ರದ ಸುತ್ತಮುತ್ತ ಜನರು ಸೇರುವುದಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ, ಹಿಂದಿನ ಚುನಾವಣೆಗಳಂತೆ ಗೆದ್ದವರ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಅಬ್ಬರದ ಸಂಭ್ರಮಾಚರಣೆ ಕಂಡುಬರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಮತ ಎಣಿಕೆ ಪ್ರಕ್ರಿಯು ಶಾಂತಿಯುತವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT