ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗರ ಭ್ರಮೆ ಬಿಡಿಸಿ: ಯಡಿಯೂರಪ್ಪ

Last Updated 8 ಜೂನ್ 2022, 15:40 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬಿಡುತ್ತದೆ ಎಂಬ ಭ್ರಮೆ ಆ ಪಕ್ಷದಲ್ಲಿ ಹೆಚ್ಚಾಗಿದೆ. ವಿಧಾನ ಪರಿಷತ್‌ ಚುನಾವಣೆಯ ಎಲ್ಲ ಸ್ಥಾನಗಳಲ್ಲೂ ಅವರನ್ನು ಸೋಲಿಸುವ ಮೂಲಕ, ಭ್ರಮಾಲೋಕದಿಂದ ಹೊರತರಬೇಕು’ ಎಂದು ಶಾಸಕ ಬಿ.ಎಸ್‌. ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.

ವಿಧಾನ ಪರಿಷತ್‌ ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ, ಪದವೀಧರ ಕ್ಷೇತ್ರದ ಅಭ್ಯರ್ಥಿ ಹಣಮಂತ ನಿರಾಣಿ ಅವರ ಪರ, ನಗರದಲ್ಲಿ ಬುಧವಾರ ಚುನಾವಣಾ ಪ್ರಚಾರ ಭಾಷಣ ಮಾಡಿ ಅವರು ಮಾತನಾಡಿದರು.

‘ಇನ್ನೂ ಚುನಾವಣೆ ನಿಗದಿಯಾಗಿಲ್ಲ. ಆದರೆ, ಈಗಾಗಲೇ ಗೆದ್ದು ಬಿಟ್ಟಿದ್ದೇವೆ ಎನ್ನುವ ಉಮೇದಿನಲ್ಲಿ ಕಾಂಗ್ರೆಸ್ಸಿಗರು ತೇಲಾಡುತ್ತಿದ್ದಾರೆ. ಯಾರಿಗೆ ಯಾವ ಖಾತೆ ಬೇಕು ಎಂದು ಹಂಚಿಕೊಳ್ಳುತ್ತಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯ ಬಳಿಕ ಅವರ ಹುಚ್ಚು ಬಿಡುವಂತೆ ಮಾಡಿ’ ಎಂದು ಮೂದಲಿಸಿದರು.

‘ಮತ್ತೊಮ್ಮೆ ಬಿಜೆಪಿಯನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುವುದು ನನ್ನ ಗುರಿ. ನನ್ನ ಪಾಡಿಗೆ ನಾನು ಈಗಾಗಲೇ ಸಿದ್ಧತೆ ಶುರು ಮಾಡಿದ್ದೇನೆ. ಪ್ರತಿ ಜಿಲ್ಲೆಗೂ ಪ್ರವಾಸ ಮಾಡುತ್ತಿದ್ದೇನೆ. ನಮ್ಮಿಂದ ಅಂತರ ಕಾಯ್ದುಕೊಂಡಿರುವ ಹಲವು ನಾಯಕರು ಇದ್ದಾರೆ. ಅವರನ್ನು ಮತ್ತೆ ನಮ್ಮ ಜೊತೆಗೆ ಎಳೆದುಕೊಂಡು, ಮುಂದೆ ಸಾಗುತ್ತೇನೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಪ್ರತಿ ದಿನ ಬೆಳಿಗ್ಗೆ 9ಕ್ಕೆ ಸಂಸತ್‌ ಭವನಕ್ಕೆ ಬರುತ್ತಾರೆ. ಇಂಥ ಕ್ರಿಯಾಶೀಲ ನಾಯಕರನ್ನು ಪಡೆದಿದ್ದು ನಮ್ಮ ಪುಣ್ಯ. ಪ್ರಧಾನಿಯೇ ಇಷ್ಟೆಲ್ಲ ಮಾಡಬೇಕಾದರೆ, ನಾವು ಪಕ್ಷಕ್ಕಾಗಿ ಎಷ್ಟು ಕೆಲಸ ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದೂ ಅವರು ಕಿವಿಮಾತು ಹೇಳಿದರು.

ನಿಮಗಾಗಿ ವೇತನ ಆಯೋಗ ನೀಡಿದೆ: ‘ಶಿಕ್ಷಕರು, ಉಪನ್ಯಾಸಕರಿಗಾಗಿ ನನ್ನ ಸರ್ಕಾರ ಇದ್ದಾಗ 5, 6 ಹಾಗೂ 7ನೇ ವೇತನ ಆಯೋಗಗಳನ್ನು ಜಾರಿ ಮಾಡಿದ್ದೇನೆ. ನಿಮ್ಮ ಸಂಬಳ ಮೂರು ಪಟ್ಟು ಹೆಚ್ವುವಂತೆ ಮಾಡಿದ್ದೇನೆ. 1997ರ ನಂತರದ ಹಲವು ಶಾಲೆ– ಕಾಲೇಜುಗಳಿಗೆ ವೇತನ ಅನುದಾನ ನೀಡಿದ್ದೇನೆ. ಇದರಿಂದ 35 ಸಾವಿರ ಶಿಕ್ಷಕರಿಗೆ ಅನುಕೂಲವಾಗಿದೆ. ನಂಜುಂಡಪ್ಪ ವರದಿ ಆಶಯದಂತೆ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಈಗ ಜವಾಬ್ದಾರಿ ನಿಮ್ಮ ಮೇಲಿದೆ. ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಿ’ ಎಂದೂ ಯಡಿಯೂರಪ್ಪ ಮನವಿ ಮಾಡಿದರು.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭೆ ಸದಸ್ಯ ಈರಪ್ಪ ಕಡಾಡಿ, ವಿಧಾನ ಪರಿಷತ್‌ ಸದಸ್ಯರಾದ ಕೇಶವ ಪ್ರಸಾದ, ಎನ್‌.ರವಿಕುಮಾರ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡ ಮಹಾಂತೇಶ ಕವಟಗಿಮಠ, ಉಜ್ವಲಾ ಬಡವಣಾಚೆ ಹಾಗೂ ಪಕ್ಷದ ಹಲವು ಮುಖಂಡರು ವೇದಿಕೆ ಮೇಲಿದ್ದರು.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT