ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಪಣ: ಸತೀಶ ಜಾರಕಿಹೊಳಿ

8ರಂದು ವೇಣುಗೋಪಾಲ್‌ ಭೇಟಿ
Last Updated 27 ಡಿಸೆಂಬರ್ 2018, 11:11 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪಣ ತೊಡಲಾಗಿದೆ’ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

‘ಹಿಂದಿನ ಚುನಾವಣೆಯಲ್ಲಿ ಚಿಕ್ಕೋಡಿಯಲ್ಲಷ್ಟೇ ಗೆದ್ದಿದ್ದೇವೆ. ಬೆಳಗಾವಿ ಕಳೆದುಕೊಂಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಎರಡೂ ಕ್ಷೇತ್ರವನ್ನೂ ವಶಪಡಿಸಿಕೊಳ್ಳಬೇಕಾಗಿದೆ. ಈ ದೊಡ್ಡ ಸವಾಲು ನಮ್ಮ ಮುಂದಿದೆ. ಇದಕ್ಕಾಗಿ ಪಕ್ಷ ಸಂಘಟನೆ ಮಾಡಬೇಕು. ಎಲ್ಲ ಘಟಕಗಳನ್ನೂ ಚುರುಕುಗೊಳಿಸಬೇಕಾಗಿದೆ’ ಎಂದರು.

‘ಒಂದು ತಿಂಗಳಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರ ಸಮಸ್ಯೆ ಆಲಿಸಲಾಗುವುದು. ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಸರ್ಕಾರದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಪಕ್ಷ, ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಾಗುವುದು. 3ನೇ ಬಾರಿಗೆ ಸಚಿವ ಸ್ಥಾನ ದೊರೆತಿದೆ. ಅದನ್ನು ಬಳಸಿಕೊಂಡು ಪಕ್ಷ ಕಟ್ಟಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

‘ಹೋದ ಲೋಕಸಭಾ ಚುನಾವಣೆಯಲ್ಲಿ ನನಗೆ ಮೂರು ಕ್ಷೇತ್ರಗಳ ನೇತೃತ್ವ ನೀಡಲಾಗಿತ್ತು. ಬೆಳಗಾವಿ, ಚಿಕ್ಕೋಡಿ ಹಾಗೂ ರಾಯಚೂರು ಕ್ಷೇತ್ರಗಳಲ್ಲಿ ಎರಡು ಕಡೆ ಗೆಲ್ಲಿಸಿದ್ದೇವೆ. ಈ ಬಾರಿ ನನ್ನ ಗುರಿ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸುವುದೇ ಆಗಿದೆ. ಇದಕ್ಕಾಗಿ ಎಲ್ಲರೂ ಕೂಡಿ ಕೆಲಸ ಮಾಡಬೇಕು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಜ. 8ರಂದು ಇಲ್ಲಿಗೆ ಬರುವ ಸಾಧ್ಯತೆ ಇದೆ. ಲೋಕಸಭಾ ಕ್ಷೇತ್ರಗಳವಾರು ಮುಖಂಡರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆಕಾಂಕ್ಷಿಗಳೊಂದಿಗೆ ಚರ್ಚಿಸಲಿದ್ದಾರೆ. ಕನಿಷ್ಠ 2–3 ತಿಂಗಳು ಮುನ್ನವೇ ಅಭ್ಯರ್ಥಿಗಳನ್ನು ಘೋಷಿಸಿದರೆ, ಸುಲಭವಾಗಿ ಗೆಲ್ಲಿಸಬಹುದಾಗಿದೆ’ ಎಂದು ಹೇಳಿದರು.

‘ಸತೀಶ ಜಾರಕಿಹೊಳಿ–ರಮೇಶ ಜಾರಕಿಹೊಳಿ ಜಿಲ್ಲೆಯ ಕಾಂಗ್ರೆಸ್‌ನ ಎರಡು ಕಣ್ಣುಗಳಿದ್ದಂತೆ. ಮುಂದಿನ ದಿನಗಳಲ್ಲೂ ಅವರಿಬ್ಬರೂ ಒಟ್ಟಿಗೆ ನಿಂತು ನಮಗೆ ಮಾರ್ಗದರ್ಶನ ಮಾಡಿದರೆ, ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಗೆಲ್ಲಬಹುದಾಗಿದೆ. ರಮೇಶ ಅವರನ್ನು ಹೈಕಮಾಂಡ್ ಮನವೊಲಿಸಿ ಪಕ್ಷದಲ್ಲಿಯೇ ಮುಂದುವರಿಸಿಕೊಂಡು ಹೋಗುವ ಪ್ರಯತ್ನವನ್ನು ಮಾಡಬೇಕು’ ಎಂದು ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಕೋರಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ, ಪಕ್ಷದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ಪದಾಧಿಕಾರಿಗಳಾದ ಎನ್.ಐ. ಕೊಡಲಿ, ಎಸ್‌.ಆರ್. ಸೋನವಾಲ್ಕರ್, ಮೋಹನ್ ರೆಡ್ಡಿ, ಶೇಖರ್ ಈಟಿ, ಸಂತೋಷ್ ಹಂಜಿ, ಶಂಕರ ಹೊಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT