ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್: ಸವದಿ ಸೂಚನೆ

ಹೊಸ ಬದುಕು ಕಟ್ಟಿಕೊಡಲು ಶ್ರಮಿಸುವಂತೆ ಸಚಿವರ ನಿರ್ದೇಶನ
Last Updated 21 ಆಗಸ್ಟ್ 2019, 11:54 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಮನೆಗಳನ್ನು ಸಂಪೂರ್ಣ ಕಳೆದುಕೊಂಡಿರುವ ಸಂತ್ರಸ್ತರಿಗೆ ತಕ್ಷಣ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಬೇಕು’ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹ ನಿರ್ವಹಣೆ ಮತ್ತು ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಬುಧವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರವಾಹಬಾಧಿತ ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯವಿರುವ ಕಡೆ ಅಥವಾ ಜಮೀನು ಇಲ್ಲದಿದ್ದರೆ ಬಾಡಿಗೆ ಜಮೀನು ಪಡೆದುಕೊಂಡು ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಬೇಕು. ಸ್ವಂತ ಶೆಡ್ ಮಾಡಿಕೊಂಡರೆ ಸರ್ಕಾರದಿಂದ ತಕ್ಷಣ ₹50 ಸಾವಿರ ನೀಡಬಹುದು. ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟರೆ, ‍ಪರಿಹಾರ ಕೇಂದ್ರಗಳಾಗಿ ಬಳಕೆಯಾಗುತ್ತಿರುವ ಶಾಲೆಗಳನ್ನು ಪುನರಾರಂಭಿಸಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ತಕ್ಷಣ ಪರಿಹಾರ ನೀಡಲು ಸೂಚನೆ:

‘ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಪರಿಹಾರದ ಹಣವನ್ನು ತಕ್ಷಣವೇ ಸಂತ್ರಸ್ತರಿಗೆ ತಲುಪಿಸಬೇಕು. ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ಹಾನಿ ಆಗಿರುವುದರಿಂದ ಕೂಡಲೇ ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ಬಿತ್ತನೆ ಅವಧಿ ಮತ್ತು ಬೆಳೆಯ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಸಮೀಕ್ಷೆ ನಡೆಸಬೇಕು. ತಾರತಮ್ಯ ಆಗದಂತೆ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೇ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ನೆರವು ಒದಗಿಸಬೇಕು’ ಎಂದು ಸೂಚಿಸಿದರು.

ಸಮೀಕ್ಷೆ-ತಾರತಮ್ಯ ಮಾಡದಂತೆ ಎಚ್ಚರಿಕೆ:

‘ಪ್ರವಾಹಬಾಧಿತ ಗ್ರಾಮಗಳಲ್ಲಿ ಮನೆಗಳು ಕುಸಿದಿರುವ ಬಗ್ಗೆ ಸಮೀಕ್ಷೆ ಮಾಡುವಾಗ ತಾರತಮ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಹಳ್ಳಿಗಳಲ್ಲಿ ಆಂತರಿಕ ರಾಜಕಾರಣ ಇರುತ್ತದೆ. ಒಂದೊಂದು ಪಕ್ಷದವರು ಬಂದು ಒಂದೊಂದು ಒತ್ತಡ ಹೇರುತ್ತಾರೆ. ಹೀಗಾಗಿ, ಲೋಪದೋಷಗಳಾದರೆ ಸಮೀಕ್ಷೆ ಮಾಡುವ ತಂಡವನ್ನೇ ಹೊಣೆಯಾಗಿಸಬೇಕು. ನ್ಯಾಯಸಮ್ಮತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಬೇಕು’ ಎಂದು ತಾಕೀತು ಮಾಡಿದರು.

‘ಸಂತ್ರಸ್ತರ ಪುನರ್ವಸತಿ ನಮ್ಮ ಆದ್ಯತೆಯಾಗಿದೆ. ಮುಳುಗಡೆಯಾಗಿರುವ ಗ್ರಾಮಗಳಲ್ಲಿ ಜನರು ಸಂಪೂರ್ಣ ಸ್ಥಳಾಂತರಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬೇಕಾಗಬಹುದು. ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ರೋಗರುಜಿನಗಳು ಬಾರದಂತೆ ನೋಡಿಕೊಳ್ಳಬೇಕು. ಜಿಲ್ಲೆಗೆ ಬಂದಿರುವ ಆಪತ್ತನ್ನು ನಾವೆಲ್ಲರೂ ಸೇರಿ ಧೈರ್ಯದಿಂದ ಎದುರಿಸಬೇಕು’ ಎಂದರು.

ವಿದ್ಯುತ್, ರಸ್ತೆ ಸಂಪರ್ಕ ಒದಗಿಸಿ:

ರಸ್ತೆ ಸಂಪರ್ಕ ಕಡಿತಗೊಂಡಿರುವ ಗ್ರಾಮಗಳು ಮತ್ತು ಸೇತುವೆಗಳ ಹಾನಿಯ ಕುರಿತು ಮಾಹಿತಿ ಪಡೆದ ಅವರು, ‘ರಸ್ತೆ, ಸೇತುವೆಗಳ ಹಾನಿಯ ಸಮೀಕ್ಷೆ ನಡೆಸಿ ದುರಸ್ತಿಗೆ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಗ್ರಾಮಗಳಿಗೆ ತಕ್ಷಣವೇ ಸಂಪರ್ಕ ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಪ್ರವಾಹಬಾಧಿತ ಗ್ರಾಮಗಳಲ್ಲಿ ಜನರ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡಲು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದರು.

ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಪೊಲೀಸ್ ಆಯುಕ್ತ ಬಿ‌.ಎಸ್. ಲೋಕೇಶ್‌ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT