ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೆಎಲ್‌ಇ ಆಸ್ಪತ್ರೆಯಲ್ಲಿ ಮತ್ತೊಂದು ಕೊರೊನಾ ಲ್ಯಾಬ್ ಉದ್ಘಾಟನೆ

Last Updated 13 ಮೇ 2020, 15:06 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ನೆಹರು ನಗರದ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಡಬ್ಲುಎಚ್‌ಒ, ಅಮೆರಿಕದ ಎಫ್‌ಡಿಎ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಪ್ರಮಾಣೀಕರಿಸಿದ ಕೊರೊನಾ ವೈರಸ್ (ಕೋವಿಡ್-19) ಪರೀಕ್ಷಾ ಪ್ರಯೋಗಾಲಯವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬುಧವಾರ ಉದ್ಘಾಟಿಸಿದರು.

ಇದರೊಂದಿಗೆ, ಕೊರೊನಾ ಪರೀಕ್ಷೆಗೆ ನಗರದಲ್ಲಿ ಎರಡು ಲ್ಯಾಬ್‌ಗಳು ಆರಂಭವಾದಂತಾಗಿದೆ. ಈಗಾಗಲೇ ಎನ್‌ಐಟಿಎಂನಲ್ಲಿ (ಐಸಿಎಂಆರ್‌–ರಾಷ್ಟ್ರೀಯ ಪಾರಂಪರಿಕ ಔಷಧ ಸಂಸ್ಥೆ) ಸ್ಥಾಪಿಸಲಾಗಿದೆ.

ಈ ವೇಳೆ ಮಾತನಾಡಿದ ಸಚಿವರು, ‘ಕೊರೊನಾ ಎದುರು ವಿಶ್ವವೆ ತಲೆಬಾಗಿ ನಿಂತಿದೆ. ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಕಾಪಾಡಲು ಅಗತ್ಯ ಸೇವಾ ಸೌಲಭ್ಯ ಒದಗಿಸಲಾಗುತ್ತಿದೆ. ಲಾಕ್‌ಡೌನ್‌ ಪರಿಸ್ಥಿಯಲ್ಲಿ ಯಾರಿಗೂ ತೊಂದರೆ ಆಗದಂತೆ ಸಾಮಾಜಿಕ, ಆರ್ಥಿಕ ಹಾಗೂ ವೈದ್ಯಕೀಯವಾಗಿ ಸರ್ಕಾರವೆ ನೆರವಾಗುತ್ತಿದೆ’ ಎಂದರು.

‘ವೈದ್ಯಕೀಯ ಸಿಬ್ಬಂದಿ ಸಾರ್ವಜನಿಕರ ಆರೋಗ್ಯ ಕಾಪಾಡಲು ಇದ್ದಾರೆ. ಸಾರ್ವಜನಿಕರು ಆ ಕೊರೊನಾ ಯೋಧರಿಗೆ ಸಹಕಾರ ನೀಡಬೇಕು’ ಎಂದು ಕೋರಿದರು.

ರಾಜ್ಯಸಭಾ ಸದಸ್ಯರೂ ಆಗಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಕೊರೊನಾ ಕಂಡುಬಂದ ತಕ್ಷಣ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿತು. ಇತರ ರೋಗಿಗಳಿಗೆ ಚಿಕಿತ್ಸೆಗೆ ತೊಂದರೆ ಆಗದಂತೆ ಎಚ್ಚರಿಕೆ ಕ್ರಮ ಕೈಕೊಂಡು ನಿರಂತರವಾಗಿ ಶುಶ್ರೂಷೆಯಲ್ಲಿ ತೊಡಗಿದೆ. ಫ್ಲೂ ಕ್ಲಿನಿಕ್, ಉಚಿತ ಆಂಬ್ಯುಲೆನ್ಸ್‌, ಪರಿಹಾರ ನಿಧಿಗೆ ₹ 2 ಕೋಟಿ ದೇಣಿಗೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡಿದೆ. ಜಿಲ್ಲಾಡಳಿತ ಹಾಗೂ ಸರ್ಕಾರದ ಕಾರ್ಯಕ್ಕೆ ಸಂಸ್ಥೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ’ ಎಂದು ತಿಳಿಸಿದರು.

‘ಈ ಪ್ರಯೋಗಾಲಯ ಅತ್ಯಾಧುನಿಕ ವೈದ್ಯಕೀಯ ಸಾಮಗ್ರಿಗಳನ್ನು ಹೊಂದಿದೆ. ಟಿಬಿ, ಎಚ್‌1ಎನ್‌1, ಹೆಪಟೈಟಿಸ್‌ (ಬಿಳಿಕಾಮಾಲೆ) ವೈರಸ್ ಪರೀಕ್ಷಿಸಬಹುದು’ ಎಂದು ವೈದ್ಯರು ಮಾಹಿತಿ ನೀಡಿದರು.

ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್. ಸಾಧುನವರ, ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವೊಜಿ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಜೆಎನ್ಎಂಸಿ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ, ಡಾ.ವಿ.ಡಿ. ಪಾಟೀಲ, ಡಾ.ಎಚ್‌.ಬಿ. ರಾಜಶೇಖರ, ಡಾ.ಪ್ರೀತಿ ಮಾಸ್ತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT