ಮೂಡಲಗಿ: ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ದೇವಸ್ಥಾನದ ಆವರಣದಲ್ಲಿಯೇ ಸೋಮವಾರ, ನವ ವಿವಾಹಿತನ ಬರ್ಬರ ಕೊಲೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಯುವಕನ ಪತ್ನಿ ಹಾಗೂ ಒಬ್ಬ ಯುವಕನನ್ನು ಬಂಧಿಸಲಾಗಿದೆ.
ವಡೇರಹಟ್ಟಿ ನಿವಾಸಿ ಶಂಕರ ಸಿದ್ಧಪ್ಪ ಜಗಮಟ್ಟಿ (25) ಕೊಲೆಯಾದವರು. ಇವರ ಪತ್ನಿ ಪ್ರಿಯಾಂಕಾ (21) ಹಾಗೂ ಆಕೆಯ ಪ್ರಿಯಕರ ಎನ್ನಲಾದ ತಾಲ್ಲೂಕಿನ ಬೈರನಟ್ಟಿ ಗ್ರಾಮದ ಶ್ರೀಧರ ಅರ್ಜುನ ತಳವಾರ (22) ಎಂಬುವವರನ್ನು ಬಂಧಿಸಲಾಗಿದೆ.
‘ಶಂಕರ ಹಾಗೂ ಪ್ರಿಯಾಂಕಾ ಕೇವಲ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಪ್ರಿಯಾಂಕಾ, ಶಂಕರ ಅವರ ಅಕ್ಕನ ಮಗಳು. ಸೋಮವಾರ ಅಮಾವಾಸ್ಯೆ ದಿನವಾದ್ದರಿಂದ ನವದಂಪತಿ ಗ್ರಾಮದ ಹೊರ ವಲಯದಲ್ಲಿರುವ ಬನಸಿದ್ಧೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ದೇವರ ದರ್ಶನ ಪಡೆದು ಹೊರಗೆ ಬರುವಷ್ಟರಲ್ಲಿ ಆರೋಪಿ ಶ್ರೀಧರ ಲಾಂಗ್‌ನಿಂದ ಕೊಚ್ಚಿ ಕೊಲೆ ಮಾಡಿದ’ ಎಂದು ಮೂಲಗಳು ಮಾಹಿತಿ ನೀಡಿವೆ.
‘ಪ್ರಿಯಾಂಕಾ ಹಾಗೂ ಶ್ರೀಧರ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾಗುವ ತಯಾರಿಯಲ್ಲಿದ್ದರು. ಆದರೆ, ಪ್ರಿಯಾಂಕಾಳನ್ನು ಆಕೆಯ ಸಂಬಂಧಿ ಶಂಕರ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಇದರಿಂದ ಶ್ರೀಧರ ಕೋಪಗೊಂಡಿದ್ದ. ಊರ ಹೊರಗಿನ ದೇವಸ್ಥಾನಕ್ಕೆ ಈ ದಂಪತಿ ಬರುವುದನ್ನು ಕಾದುನೋಡುತ್ತಿದ್ದ ಆರೋಪಿ, ಮಾರಕಾಸ್ತ್ರದಿಂದ ದಾಳಿ ಮಾಡಿದ. ತೀವ್ರ ರಕ್ತಸ್ರಾವದಿಂದ ಶಂಕರ ಸ್ಥಳದಲ್ಲೇ ಮೃತಪಟ್ಟರು. ಸಂಚು ರೂಪಿಸಿದ ಅನುಮಾನವಿದ್ದ ಕಾರಣ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದರು.
ನಿನ್ನೆಯೇ ಹುಟ್ಟುಹಬ್ಬ ಆಚರಿಸಿದ್ದ ಪತಿ: ಭಾನುವಾರ ರಾತ್ರಿಯಷ್ಟೇ ಪ್ರಿಯಾಂಕಾ ಅವರ ಜನ್ಮದಿನವನ್ನು ಪತಿ ಶಂಕರ ಆಚರಿಸಿದ್ದ. ಅವರ ಪುಟ್ಟ ಮನೆಯಲ್ಲಿ ಸಣ್ಣ ಕಾರ್ಯಕ್ರಮ ಮಾಡಿ, ಕುಟುಂಬದವರೆಲ್ಲ ಸಿಹಿ ತಿಂದು ಸಂಭ್ರಮಪಟ್ಟಿದ್ದರು. ಆದರೆ, ಬೆಳಕಾಗುವಷ್ಟರಲ್ಲಿ ಪತ್ನಿ ಕಣ್ಣೆದುರೇ ಪತಿಯ ಬರ್ಬರ ಕೊಲೆ ನಡೆಯಿತು.
ವಿಷಯ ತಿಳಿದು ಇಡೀ ಗ್ರಾಮದ ಜನ ಸ್ಥಳಕ್ಕೆ ಓಡಿಬಂದರು. ವಾತಾವರಣ ಕೆಲಕಾಲ ತ್ವೇಷಮಯವಾಯಿತು. ಸ್ಥಳಕ್ಕೆ ಧಾವಿಸಿದ ಮೂಡಲಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಮೃತನ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.
‘ತಡರಾತ್ರಿ ಗಂಡ ನನ್ನ ಬರ್ತಡೇ ಮಾಡಿದ್ದರು. ಸೋಮವಾರ ಬೆಳಗಿನ ಜಾವ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದರು. ದೇವಸ್ಥಾನದಿಂದ ಹೊರಬಂದ ಮೇಲೆ ಬೈಕ್ ತಿರುಗಿಸಿಕೊಂಡು ಬರುತ್ತಾರೆ ಎಂದು ನಾನು ಮುಂದೆ ಹೋಗಿ ನಿಂತೆ. ಅಷ್ಟರಲ್ಲಿ ಒಬ್ಬ ಲಾಂಗ್ ಹಿಡಿದು ಬಂದು ಹಲ್ಲೆ ಮಾಡಿ ಪರಾರಿಯಾದ. ನಾನು ಓಡಿ ಬರುವಷ್ಟರಲ್ಲಿ ಪತಿ ಕೆಳಗೆ ಬಿದ್ದರು. ನಮ್ಮಿಬ್ಬರ ಮಧ್ಯೆ ಯಾವ ಜಗಳವೂ ಇರಲಿಲ್ಲ’ ಎಂದು ಪ್ರಿಯಾಂಕಾ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.