ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನೀರು ಪಾಲು; ರೈತರಿಗೆ ನಷ್ಟ

Last Updated 17 ನವೆಂಬರ್ 2021, 9:29 IST
ಅಕ್ಷರ ಗಾತ್ರ

ಬೆಳಗಾವಿ: ಮಂಗಳವಾರ ರಾತ್ರಿ ಸುರಿದ ಜೋರು ಮಳೆಯಿಂದಾಗಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಭತ್ತದ ಬೆಳೆಗೆ ಬಹಳಷ್ಟು ಹಾನಿಯಾಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಹ ಸ್ಥಿತಿ ರೈತರಿಗೆ ಎದುರಾಗಿದೆ.

ಕೋವಿಡ್‌ ಲಾಕ್‌ಡೌನ್‌ನಿಂದ ಉಂಟಾಗಿದ್ದ ಮಾರುಕಟ್ಟೆ ಸಮಸ್ಯೆ, ಪ್ರವಾಹ ಮತ್ತು ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ರೈತರು ಈಗ ಅಕಾಲಿಕ ಮಳೆಯಿಂದಾಗಿ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳಗಾವಿ, ಖಾನಾಪುರ ಹಾಗೂ ಕಿತ್ತೂರು ಭಾಗದಲ್ಲಿ ಭತ್ತವನ್ನು ಬೆಳೆಯುತ್ತಾರೆ. ಅಲ್ಲಿ ರೈತರು, ಕೊಯ್ಲಿನ ಸಮಯಕ್ಕೆ ಸರಿಯಾಗಿ ಮಳೆಯಾದ್ದರಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೆಡೆ ಕೊಯ್ಲು ಮಾಡಿದ್ದ ಭತ್ತವನ್ನು ಜಮೀನುಗಳಲ್ಲೇ ಬಣವೆ (ಮೆದೆ) ಹಾಕಿದ್ದರು. ಅದು ಕೂಡ ಜಲಾವೃತವಾಗಿದೆ. ಕೆಲವೆಡೆ ಕೊಯ್ಲು ಮಾಡಿ ಒಣಗಲು ಗದ್ದೆಯಲ್ಲಿ ಬಿಟ್ಟಿದ್ದ ಭತ್ತ ನೀರುಪಾಲಾಗಿದೆ. ಅದನ್ನು ರಾಶಿ ಮಾಡುವುದಕ್ಕೆ ಕಷ್ಟವಾಗಿದೆ. ನೀರು ಇಂಗುವವರೆಗೆ, ಹುಲ್ಲು ಒಣಗುವವರೆಗೂ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಇಲಾಖೆಯ ಮಾಹಿತಿ ‍ಪ್ರಕಾರ, ಜಿಲ್ಲೆಯಲ್ಲಿ ಖಾನಾಪುರದಲ್ಲಿ ಅತಿ ಹೆಚ್ಚು ಅಂದರೆ 46 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಇದರೊಂದಿಗೆ ಬೆಳಗಾವಿ, ಕಿತ್ತೂರು ಸೇರಿದಂತೆ ಒಟ್ಟು 60ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದಾರೆ. ಕೆಲವು ಕಡೆಗಳಲ್ಲಿ ಮಾತ್ರವೇ ಕೊಯ್ಲು ಮುಗಿದಿದೆ. ಬಹುತೇಕ ಭತ್ತ ಕೊಯ್ಲಿಗೆ ಬಾಕಿ ಇದೆ. ಈ ಪೈಕಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸಾವಿರಾರು ಎಕರೆ ಭತ್ತಕ್ಕೆ ಹಾನಿಯಾಗಿದೆ. ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿಲ್ಲ.

ಕಂಗ್ರಾಳಿ ಬಿ.ಕೆ., ಕಂಗ್ರಾಳಿ ಕೆ.ಎಚ್‌., ಯಳ್ಳೂರು, ಮಚ್ಛೆ, ವಡಗಾವಿ, ದೇಸೂರು, ಕಾಕತಿ, ಹಿಂಡಲಗಾ ಮೊದಲಾದ ಕಡೆಗಳಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಜಲಾವೃತವಾಗಿದೆ. ಬೆಳಗಾವಿ ತಾಲ್ಲೂಕಿನ ವಿಶೇಷ ತಳಿಯಾದ ‘ಬೆಳಗಾವಿ ಬಾಸುಮತಿ’ ಕೂಡ ಹಾಳಾಗಿದೆ.

‘ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮತ್ತೆ ಮಳೆ ಮುಂದುವರಿದರೆ ಭತ್ತದ ಕೊಯ್ಲು, ರಾಶಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕೊಯ್ಲು ಮಾಡಿದ ಭತ್ತ ಜಮೀನಿನಲ್ಲೇ ಮೊಳಕೆ ಬರುವ ಸಾಧ್ಯತೆಯೂ ಇದೆ. ಇದರಿಂದ ನಮಗೆ ನಷ್ಟವಾಗಲಿದೆ. ಇಲಾಖೆಯವರು ಸಮೀಕ್ಷೆ ನಡೆಸಿ, ಬೆಳೆ ಹಾನಿಗೆ ಪರಿಹಾರ ಕೊಡಿಸಬೇಕು’ ಎನ್ನುವುದು ರೈತರ ಆಗ್ರಹ.

ಮಳೆಯಿಂದಾಗಿ ಭತ್ತದ ಗದ್ದೆಗೆ ಹಾನಿಯಾಗಿರುವುದು
ಮಳೆಯಿಂದಾಗಿ ಭತ್ತದ ಗದ್ದೆಗೆ ಹಾನಿಯಾಗಿರುವುದು

ಮಳೆಯಿಂದಾಗಿ, ಗದ್ದೆಗಳು ಜಲಾವೃತವಾಗಿರುವುದರಿಂದ ಕಬ್ಬು ಕಟಾವಿಗೂ ತೊಂದರೆ ಉಂಟಾಗಿದೆ.

‘ಮಳೆಯಿಂದಾಗಿ ಸಾವಿರಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಕೊಯ್ಲು ಮಾಡಿದ್ದು ಹಾಗೂ ಬಣವೆ ಹಾಕಿದ್ದು ಕೂಡ ನೀರು ಪಾಲಾಗಿದೆ. ಬೆಳಗಾವಿ ಬಾಸುಮತಿ ಭತ್ತ ಎಕರೆಗೆ 20 ಕ್ವಿಂಟಲ್‌ ಬರುತ್ತಿತ್ತು. ತಲಾ 3ಸಾವಿರದಂತೆ ಮಾರಿದರೂ ₹ 60ಸಾವಿರ ಸಿಗುತ್ತಿತ್ತು. ಅದನ್ನು ಸರ್ಕಾರ ತುಂಬಿಕೊಡಬೇಕು. ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ಬೆಳೆ ಹಾನಿಯಾಗುವುದನ್ನು ತಪ್ಪಿಸಬೇಕು’ ಎಂದು ಯಳ್ಳೂರಿನ ರೈತ ರಾಜು ಒತ್ತಾಯಿಸಿದರು.

ಭತ್ತದ ಗದ್ದೆಯಲ್ಲಿ ನೀರು ನಿಂತಿರುವುದು
ಭತ್ತದ ಗದ್ದೆಯಲ್ಲಿ ನೀರು ನಿಂತಿರುವುದು

‘ಮಂಗಳವಾರ ಜಿಲ್ಲೆಯ ವಿವಿಧೆಡೆ ಸುರಿದ ಮಳೆಯಿಂದಾಗಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಗೋಕಾಕ, ಮೂಡಲಗಿ ಮೊದಲಾದ ತಾಲ್ಲೂಕುಗಳಲ್ಲಿ ಹಿಂಗಾರು ಹಂಗಾಮಿನ ಹಲವು ಬೆಳೆಗಳಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ, ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಭತ್ತಕ್ಕೆ ಅಲ್ಲಲ್ಲಿ ಹಾನಿಯಾಗಿರುವ ಮಾಹಿತಿ ಇದೆ. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ಭತ್ತದ ಗದ್ದೆ ಜಲಾವೃತ
ಭತ್ತದ ಗದ್ದೆ ಜಲಾವೃತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT